ರಾಯಚೂರು ಮಾರ್ಚ್ 25 (ಕರ್ನಾಟಕ ವಾರ್ತೆ): ಮುಂಬರಲಿರುವ ಏಪ್ರೀಲ್ ಮೊದಲ ವಾರದಲ್ಲಿ ರಾಯಚೂರು ಜಿಲ್ಲೆಯ ಎಲ್ಲೆ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಮೊದಲಾದ್ಯತೆ ನೀಡಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಹೇಳಿದರು.
ರಾಯಚೂರು ಜಿಲ್ಲೆಯಲ್ಲಿ ಮುಂಬರುವ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ, ಇತ್ತೀಚೆಗೆ ಸುರಿದ ಆಲಿಕಲ್ ಮಳೆಯಿಂದಾದ ಬೆಳೆಹಾನಿ ಹಾಗೂ ಮೇವು ಲಭ್ಯತೆ ಕುರಿತು, ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಮಾರ್ಚ 24ರಂದು ಸಂಜೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಯಚೂರು ಜಿಲ್ಲೆಯಲ್ಲಿ ಸಿಂಧನೂರ ತಾಲೂಕಿನಲ್ಲಿ ಅತೀ ಹೆಚ್ಚು 155 ಕೆರೆಗಳಿದ್ದು ಈ ಎಲ್ಲ ಕೆರೆಗಳನ್ನು ಭರ್ತಿ ಮಾಡಬೇಕು. ಇನ್ನುಳಿದಂತೆ ರಾಯಚೂರು ತಾಲೂಕಿನಲ್ಲಿ 15, ಮಾನವಿ ತಾಲೂಕಿನಲ್ಲಿ 18, ಅರಕೇರಾ ತಾಲೂಕಿನಲ್ಲಿ 13, ಮಸ್ಕಿ ತಾಲೂಕಿನಲ್ಲಿ 24, ಸಿರವಾರ ತಾಲೂಕಿನಲ್ಲಿ 43 ಹಾಗೂ ಲಿಂಗಸೂರ ತಾಲೂಕಿನಲ್ಲಿ 2 ಕೆರೆಗಳಿದ್ದು ಈ ಎಲ್ಲ ಕೆರೆಗಳನ್ನು ಮುಂದಿನ ತಿಂಗಳು ಜಾಗ್ರತೆಯಿಂದ ತುಂಬಿಸಬೇಕು. ಮಳೆಗಾಲದವರೆಗೆ ಮುಂದೆ ನೀರು ಸಿಗುವುದಿಲ್ಲ ಎಂದು ತಿಳಿಸಿದರು.
ಆಯಾ ತಾಲೂಕಿನ ತಹಸೀಲ್ದಾರರು, ಕಾರ್ಯ ನಿರ್ವಾಹಕ ಅಧಿಕಾರಿಗಳು ಸಹಾಯಕ ಆಯುಕ್ತರ ಸಮ್ಮುಖದಲ್ಲಿ ಒಗ್ಗೂಡಿ ಅತ್ಯಂತ ಕಾಳಜಿಯಿಂದ ಕೆರೆಗಳನ್ನು ತುಂಬಿಸಬೇಕು. ಈಗೊಂದು ವೇಳೆ ಕೆರೆ ತುಂಬಿಸದಿದ್ದಲ್ಲಿ ಜನತೆಗೆ ತೊಂದರೆಯಾಗಲಿದೆ. ಮುಂದಿನ ಜುಲೈವರೆಗೆ ಮತ್ತೆ ನೀರು ಸಿಗುವುದಿಲ್ಲ. ಏಪ್ರೀಲ್, ಮೇ ಮತ್ತು ಜೂನ್ ಮಾಹೆಯಲ್ಲಿ ಯಾವುದೇ ರೀತಿಯಲ್ಲಿ ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗದ ಹಾಗೆ ವ್ಯವಸ್ಥೆಯಾಗಬೇಕು.
ಬರುವ ಏಪ್ರೀಲ್ ಮೊದಲನೇ ವಾರದಲ್ಲಿ ನೀರು ಹರಿಸಲಾಗುವುದು. ಈ ವೇಳೆ ಕೆರೆಗೆ ನೀರು ತುಂಬಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಯಾವುದಾದರು ಗ್ರಾಮಸ್ಥರಿಗೆ ತೊಂದರೆಯಾದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಕೆರೆಗಳಿಗೆ ನೀರು ತುಂಬಿಸದೇ ಬೇಜವಾಬ್ದಾರಿ ವಹಿಸಿರುವುದು ಗೊತ್ತಾದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯನುಸಾರ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಸಹಾಯಕ ಆಯುಕ್ತರು, ಎಲ್ಲ ತಾಲೂಕಿನ ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಇನ್ನೀತರ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಸಿಲಿನ ತಾಪಮಾಣದ ಪ್ರಮಾಣ ಹೆಚ್ಚಾಗಿದೆ. ಲಿಂಗಸೂರು, ದೇವದುರ್ಗ, ರಾಯಚೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿರುವುದಾಗಿ ಕಂಡು ಬಂದಿದೆ. ಜಿಲ್ಲೆಯಲ್ಲಿ ಈಗಾಗಲೇ 35 ಹಳ್ಳಿಗಳನ್ನು ಸಮಸ್ಯಾತ್ಮಕ ಹಳ್ಳಿಗಳೆಂದು ಗುರುತಿಸಿದ್ದು ಈ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಕಾಲುವೆಗಳಿಗೆ ನೀರು ಹರಿಸಲು ಇನ್ನು ಒಂದು ವಾರ ಸಮಯ ಇದ್ದು, ಅಷ್ಟರೊಳಗೆ ಸಹಾಯಕ ಆಯುಕ್ತರು, ಆಯಾ ತಾಲೂಕಿನ ಎಲ್ಲ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಎಲ್ಲ ಕಡೆಗೆ ಪ್ರವಾಸ ಕೈಗೊಂಡು ಖದ್ದು ಭೇಟಿ ನೀಡಿ ನೀರಿನ ಸಮಸ್ಯೆ ಯಾವ ಕಡೆಗಿದೆ ಎಂಬುದನ್ನು ಗುರುತಿಸಿ ಅಲ್ಲಿ ರ‍್ಯಾಯ ವ್ಯವಸ್ಥೆಗೆ ಕ್ರಮವಹಿಸಬೇಕು. ಆಯಾ ಕಡೆಗಳಲ್ಲಿ ಕೆರೆಗಳ ನೀರಿನ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ವರದಿ ಸಿದ್ಧಪಡಿಸಿ ಎಲ್ಲ ಕೆರೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಜಂಟಿ ಸಭೆಗೆ ಸೂಚನೆ: ಜಿಲ್ಲಾ ಉಸ್ತುವಾರಿ ಸಚಿವರು ಏಪ್ರೀಲ್ ಮೊದಲ ವಾರದಲ್ಲಿ ವಿಪತ್ತು ನಿರ್ವಹಣಾ ವಿಷಯದ ಬಗ್ಗೆ ಸಭೆ ನಡೆಸಲಿದ್ದಾರೆ. ಆ ಸಮಯದೊಳಗೆ ಕೆರೆಗಳ ಭರ್ತಿ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಬೇಕು. ಸಭೆಗೆ ಸರಿಯಾದ ಮಾಹಿತಿ ನೀಡಬೇಕು. ತಹಸೀಲ್ದಾರರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಆಯಾ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಎಲ್ಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿ ಕೆರೆಗಳ ಪರಿಸ್ಥಿತಿ, ನೀರಿನ ಸಮಸ್ಯೆ ಎದುರಿಸುವ ಹಳ್ಳಿಗಳ ವಿವರ ಸೇರಿದಂತೆ ಎಲ್ಲ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸಿರವಾರ ತಾಲೂಕಿನ ತಹಸೀಲ್ದಾರರು ಮತ್ತು ಇಓಗಳು ಹೆಚ್ಚಿನ ಕಾಳಜಿಯಿಂದ ಕೆಲಸ ಮಾಡಬೇಕು. ಸಿರವಾರ ತಾಲೂಕಿನ ಎಲ್ಲ ಹಳ್ಳಿಗಳಿಗೆ ಬೋರವೆಲ್ ಮೂಲಕವೇ ನೀರು ಪೂರೈಕೆಯಾಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸಿ ನೀರು ಸಿಗದ ಗ್ರಾಮಗಳಲ್ಲಿ ಖಾಸಗಿ ಬೋರವೆಲ್‌ಗಳ ಮೂಲಕ ನೀರು ಸರಬರಾಜು ಕಾರ್ಯ ಆಗಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಬೇಸಿಗೆ ಸಮಯದಲ್ಲಿ ಎಲ್ಲ ಅಧಿಕಾರಿಗಳು ಜಾಗೃತೆಯಿಂದ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದಾದರು ಹಳ್ಳಿಗಳಲ್ಲಿ ತೊಂದರೆ ಎದುರಾದರೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ದಾವಿಸಿ ಸ್ಪಂದಿಸಿ ಸಮಸ್ಯೆಯನ್ನು ತಮ್ಮ ಹಂತದಲ್ಲೇ ಇತ್ಯರ್ಥಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ನಿಯಮಿತ ಪರೀಕ್ಷೆ ನಡೆಸಿ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಈಶ್ವರ ಕಾಂದೂ ಅವರು ಮಾತನಾಡಿ, ಸಮಸ್ಯಾತ್ಮಕ ಹಳ್ಳಿಗಳಲ್ಲಿ ಖಾಸಗಿ ಬೋರವೆಲ್‌ಗಳನ್ನು ಗುರುತಿಸಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಬೇಕು. ರಾಯಚೂರು ಮತ್ತು ಸಿಂಧನೂರ ನಗರಸಭೆ ವ್ಯಾಪ್ತಿಯಲ್ಲಿ ಮತ್ತು ಜಿಲ್ಲಾ ವ್ಯಾಪ್ತಿಯ ಎಲ್ಲ ಹಳ್ಳಗಳಲ್ಲಿ ಪರೀಕ್ಷಿಸಿದ ಬಳಿಕವೇ ಕುಡಿಯುವ ನೀರು ಪೂರೈಸಬೇಕು. ಕುಡಿಯುವ ನೀರಿನ ಪರೀಕ್ಷೆಯನ್ನು ನಿಯಮಿತವಾಗಿ ಮಾಡಬೇಕು ಎಂದು ಅವರು ನಿರ್ದೇಶನ ನೀಡಿದರು. ದೇವದುರ್ಗ, ಸಿರವಾರ ಮತ್ತು ಮಾನವಿಗಳಲ್ಲಿ ಟಾಸ್ಕಪೋರ್ಸ್ ಸಭೆಗೆ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಭಜಂತ್ರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಂಧನೂರ, ಮಾನವಿ, ಮಸ್ಕಿ, ಲಿಂಗಸೂರು, ಅರಕೇರಾ, ಸಿರವಾರ, ದೇವದುರ್ಗ, ರಾಯಚೂರು ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *