ಕೊಪ್ಪಳ : “ವಚನ ಸಾಹಿತ್ಯದ ಆದ್ಯ ಪ್ರವರ್ತಕರಲ್ಲಿ ಒಬ್ಬರಾದ ದೇವರ ದಾಸಿಮಯ್ಯನವರ ಕೊಡುಗೆ ಅನನ್ಯ. ಅವರ ವಚನಗಳು ಕೇವಲ ಸಾಹಿತ್ಯವಲ್ಲ, ಅವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೈಗನ್ನಡಿಗಳಾಗಿವೆ,” ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ಅಭಿಪ್ರಾಯಪಟ್ಟರು.ಸೋಮವಾರ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ದಾಸಿಮಯ್ಯನವರು ಜಾತಿ ಭೇದವನ್ನು ಮೆಟ್ಟಿ ನಿಂತು, ಭಕ್ತಿ ಮತ್ತು ಸಮಾನತೆಯ ತತ್ವಗಳನ್ನು ಸಾರಿದ ಮಹಾನ್ ಮಾನವತಾವಾದಿ.ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ಬದುಕಿನ ಮೌಲ್ಯಗಳನ್ನು ತಿಳಿಸಿಕೊಟ್ಟ ಶ್ರೇಷ್ಠ ವಚನಕಾರರು ಅವರು.ಗಂಗಾವತಿಯ ಸಾಹಿತಿ ಅಮರಮ್ಮ ಕೋಚಿ ಅವರು ವಿಶೇಷ ಉಪನ್ಯಾಸ ನೀಡಿ, “ದಾಸಿಮಯ್ಯನವರು ಅಂದಿನ ಕಾಲದ ಮೂಢನಂಬಿಕೆಗಳನ್ನು ತಮ್ಮ ಪ್ರಭಾವಶಾಲಿ ವಚನಗಳ ಮೂಲಕ ಖಂಡಿಸಿದ್ದರು. ಅವರನ್ನು ವಚನ ಸಾಹಿತ್ಯದ ‘ಆದ್ಯ ವಚನಕಾರ’ ಎಂದು ಗೌರವಿಸಲಾಗುತ್ತದೆ,” ಎಂದರು.ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಗವಿಸಿದ್ದಪ್ಪ, ನೇಕಾರ ಸಮುದಾಯದ ಅಧ್ಯಕ್ಷರಾದ ಶಿವಶಂಕರಪ್ಪ ಚೆನ್ನಿ, ಶಿವಶಂಕರಪ್ಪ ಕರಡಕಲ ಸೇರಿದಂತೆ ಅನೇಕ ಸಮಾಜದ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಗೌರಿಶಂಕರ ದೇವಸ್ಥಾನದಿಂದ ಸಾಹಿತ್ಯ ಭವನದವರೆಗೆ ದಾಸಿಮಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

