ರಾಯಚೂರು:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಲು ನಿರ್ಧರಿಸಲಾಗಿದೆ. ಈ ಕುರಿತು ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಕೃಷ್ಣ ಶಾವಂತಗೇರಿ ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಾರ್ಚ್ 31ರಂದು ಸಂಜೆ 4:00 ಗಂಟೆಗೆ ನಗರದ ಪ್ರಸಿದ್ಧ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಮಹಿಳಾ ನೌಕರರು ಪಾಲ್ಗೊಳ್ಳಲಿದ್ದಾರೆ.ಮಹಿಳಾ ದಿನಾಚರಣೆಯ ಮುನ್ನೋಡಿಯಾಗಿ ಮಾರ್ಚ್ 29ರಂದು ಬೆಳಿಗ್ಗೆಯಿಂದ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಮಹಿಳಾ ನೌಕರರಿಗಾಗಿ ವಿವಿಧ ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.ಸರ್ಕಾರಿ ಸೇವೆಯಲ್ಲಿರುವ ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಹಾಗೂ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಈ ಕ್ರೀಡಾಕೂಟವು ಉತ್ತಮ ವೇದಿಕೆಯಾಗಲಿದೆ ಎಂದು ಅಧ್ಯಕ್ಷರು ಆಶಯ ವ್ಯಕ್ತಪಡಿಸಿದರು.ಸಮಾಜದ ಮತ್ತು ಆಡಳಿತದ ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಪಾತ್ರ ಅನನ್ಯವಾದುದು. ಕಚೇರಿಯ ಒತ್ತಡದ ನಡುವೆಯೂ ಕುಟುಂಬ ಮತ್ತು ಕರ್ತವ್ಯವನ್ನು ಸಮತೋಲನದಿಂದ ನಿಭಾಯಿಸುವ ಮಹಿಳಾ ನೌಕರರನ್ನು ಗೌರವಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಸಾಧಕ ಮಹಿಳಾ ನೌಕರರಿಗೆ ಸನ್ಮಾನ ಹಾಗೂ ವಿಶೇಷ ಉಪನ್ಯಾಸಗಳನ್ನೂ ಆಯೋಜಿಸುವ ಸಾಧ್ಯತೆ ಇದೆ.ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಛಾಯಾದೇವಿ, ಜಯಶ್ರೀ, ವಿಜಯಲಕ್ಷ್ಮೀ, ರತ್ನ, ಯಂಕಪ್ಪ, ಸಂತೋಷ, ನೀಲಮ್ಮ ಹಾಗೂ ರಾಜಶೇಖರ ನಾಯಕ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *