ಮನುಷ್ಯನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಬಹಳ ಪೂರಕವಾಗಿದ್ದು, ಪ್ರತಿಯೊಬ್ಬರೂ ದಿನದ ಕೆಲ ಸಮಯವನ್ನು ಕ್ರೀಡೆ ಅಥವಾ ವ್ಯಾಯಾಮಕ್ಕಾಗಿ ಮೀಸಲಿಡುವುದು ಇಂದಿನ ಒತ್ತಡದ ಬದುಕಿನಲ್ಲಿ ಅತ್ಯಗತ್ಯ ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಅವರು ತಿಳಿಸಿದರು.ನಗರದ ಎಐಟಿ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಫ್ರೆಂಡ್ಸ್ ಕ್ರಿಕೆಟ್ ಕಪ್‌-2026’ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಕೆಲಸದ ಒತ್ತಡದ ನಡುವೆ ಕೇವಲ ಉದ್ಯೋಗಕ್ಕೆ ಜೀವನ ಸೀಮಿತಗೊಳಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ವ್ಯಾಯಾಮವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಆಯುಕ್ತರು ಕರೆ ನೀಡಿದರು.ಇಂದಿನ ಯುವಜನತೆ ರಜಾ ದಿನಗಳಲ್ಲಿ ಮದ್ಯಪಾನ, ಧೂಮಪಾನದಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಇವುಗಳ ಬದಲಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದು ಅವರು ಎಚ್ಚರಿಸಿದರು.ನಗರಸಭೆ ಸದಸ್ಯ ಶಾದಮ್ ಆಲಂಖಾನ್ ಮಾತನಾಡಿ, ಭಾರತದಲ್ಲಿ ಕ್ರಿಕೆಟ್ ಮನೆಮಾತಾಗಿರುವ ಕ್ರೀಡೆ. ಯುವಜನತೆ ತಮಗಿಷ್ಟವಾದ ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಧನೆ ಮಾಡಬೇಕು ಎಂದರು.ಪೌರ ನೌಕರರ ಸಂಘದ ಅಧ್ಯಕ್ಷ ಅಣ್ಣಯ್ಯ ಮಾತನಾಡಿ, ಈ ಬಾರಿಯ ಟೂರ್ನಿಯಲ್ಲಿ ಒಟ್ಟು ನಾಲ್ಕು ತಂಡಗಳು ಭಾಗವಹಿಸುತ್ತಿವೆ:ಗೇಮ್ ಚೇಂಜರ್
ಡಾಮಿನೇಟರ್
ರಾಯಲ್ ವಾರಿಯರ್ಸ್‌
ಟೀಂ ಕಮಾಂಡೊ ,ಟೂರ್ನಿಯಲ್ಲಿ ಒಟ್ಟು 9 ಪಂದ್ಯಗಳು ನಡೆಯಲಿದ್ದು, ಪೌರ ನೌಕರರ ಮಕ್ಕಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ನವೀನ್ ಹಾಗೂ ಪೌರ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *