ರಾಯಚೂರು : ನಗರದ ಭಗತ್ ಸಿಂಗ್ ಸರ್ಕಲ್ ನಲ್ಲಿ ಎಐಡಿಎಸ್ಓ, ಎಐಡಿವೈಓ, ಎಐಎಂಎಸ್ಎಸ್ ಸಂಘಟನೆಗಳಿಂದ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್, ರಾಜಗುರು ಅವರ ಹುತಾತ್ಮ ದಿನವನ್ನು ಆಚರಿಸಲಾಯಿತು
ಸಾಹಿತಿ ಬಶೀರ್ ಅಹ್ಮದ್ ಹೊಸಮನಿ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಮಹೇಶ ಚಿಕ್ಕಲಪರವಿ, ಎಐಎಂಎಸ್ಎಸ್ ಜಿಲ್ಲಾ ಸಂಘಟನಾಕಾರರಾದ ಸರೋಜ ಗೊನವಾರ ಅವರು ಕ್ರಾಂತಿಕಾರಿಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಸಭೆಯನ್ನು ಉದ್ದೇಶೀಸಿ ಕೃಷಿ ವಿವಿ ಸಂಶೋಧನಾ ವಿದ್ಯಾರ್ಥಿ ಹಾಗೂ ಎ ಐ ಡಿ ವೈ ಓ ಸದಸ್ಯರಾದ ಶಿವಪ್ಪ ಅಸ್ಕಿಹಾಳ್ ಅವರು ಮಾತನಾಡಿ, ಭಗತ್ ಸಿಂಗ್ ಅವರು ಪುಸ್ತಕ ಪ್ರೇಮಿಯಾಗಿದ್ದರು. ಅತಿ ಕಡಿಮೆ ವಯಸ್ಸಿನಲ್ಲಿ ಬಹಳಷ್ಟು ಪುಸ್ತಕವನ್ನು ಓದಿದ್ದರು. ಭಾರತದಲ್ಲಿ ಕ್ರಾಂತಿಯಾಗಬೇಕೆಂದರೆ ಗನ್ನಿನ ಜೊತೆ ಪೆನ್ನಿನ ಅವಶ್ಯಕತೆ ಇದೆ ಎಂದು ಅರಿತಿದ್ದರು. ಭಗತ್ ಸಿಂಗ್ ಮೇಲೆ ಜಲಿಯನ್ ವಾಲಾಬಾಗ್ ಘಟನೆ ಅತ್ಯಂತ ಗಾಢವಾದ ಪರಿಣಾಮವನ್ನು ಬೀರಿತ್ತು. ಹಾಗಾಗಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಹೋರಾಡುವ ಸಂಕಲ್ಪನವರು ತೊಟ್ಟಿದ್ದರು.
ಭಗತ್ ಸಿಂಗ್ ಅವರ ನೇತೃತ್ವದ ಕ್ರಾಂತಿಕಾರಿಗಳ ಗುಂಪು ಜಾತಿ ಪದ್ಧತಿ, ಕೋಮುವಾದದಂತ ಸಾಮಾಜಿಕ ಪಿಡುಗುಗಳ ವಿರುದ್ಧ ರಾಜಿರಹಿತವಾಗಿ ಹೋರಾಟ ನಡೆಸಿದರು.
ಭಗತ್ ಸಿಂಗ್ ಮತ್ತು ಸಂಗಡಿಗರು ಅವರ ಗುರುಗಳಾದ ವಿದ್ಯಾಲಂಕಾರ ಅವರ ಮಾರ್ಗದರ್ಶನದಂತೆ ಹೆಚ್.ಎಸ್.ಆರ್. ಎ (ಹಿಂದೂಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್) ಎಂಬ ಕ್ರಾಂತಿಕಾರಿ ಸಂಘಟನೆಯಲ್ಲಿ ಸಕ್ರಿಯವಾಗಿದ್ದರು” ಎಂದರು.
ತದ ನಂತರ ಸಭೆಯ ಉದ್ದೇಶಿಸಿ ಎಐಡಿವೈಓ ಜಿಲ್ಲಾ ಅಧ್ಯಕ್ಷರಾದ ಚನ್ನಬಸವ ಜಾನೇಕಲ್
ಭಗತ್ ಸಿಂಗ್ ಅವರು ಯಾವತ್ತೂ ಜೀವನದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ನಂಬಿದ ತತ್ವಕ್ಕಾಗಿ ಜೀವವನ್ನೇ ಕೊಟ್ಟರು. ಬ್ರಿಟಿಷರ ವಿರುದ್ಧ ರಾಜಿ ಮಾಡಿಕೊಳ್ಳದೆ ನಗುನಗುತ್ತಾ ಗಲ್ಲಿಗೆ ಹೋದರು. ಬ್ರಿಟಿಷರನ್ನು ಭಾರತದಿಂದ ಓಡಿಸುವುದು ಮಾತ್ರ ಅವರ ಗುರಿಯಾಗಿರಲಿಲ್ಲ. ಅವರ ಗುರಿ ಲೆನಿನ್ ನೇತೃತ್ವದಲ್ಲಿ ರಷ್ಯಾದಲ್ಲಿ ನಡೆದ ಸಮಾಜವಾದಿ ಕ್ರಾಂತಿಯಂತೆ ಭಾರತದಲ್ಲಿ ಕೂಡ ಸಮಾಜವಾದಿ ಕ್ರಾಂತಿ ನೆರವೇರಿಸಲು ಪಣತೊಟ್ಟಿದ್ದರು. ಅದಕ್ಕಾಗಿ ತಮ್ಮ ಜೀವನ ಬಲಿದಾನ ಮಾಡಿದರು. ಹೇಡಿ ಬ್ರಿಟಿಷರು ಅವರನ್ನು ಗಲ್ಲಿಗೆ ಹಾಕಿದರು. ಆಗ ಭಗತ್ ಸಿಂಗ್ “ನನ್ನನ್ನು ಗಲ್ಲಿಗೆ ಹಾಕಬಹುದು ನನ್ನ ವಿಚಾರಗಳು ನಾಶ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದರು. ಅದರಂತೆ ನಮ್ಮ ಸಂಘಟನೆಗಳು
ಇಂದು ಅವರ ಕನಸಿನ ಭಾರತ ನಿರ್ಮಾಣ ಮಾಡಲು ಶ್ರಮಿಸುತ್ತಿವೆ ಎಂದರು.
ಇಂದು ದೇಶವು ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಿಕ್ಕಟ್ಟಿನಲ್ಲಿದೆ. ಒಂದು ಕಡೆ ಶಿಕ್ಷಣ ಸಂಪೂರ್ಣವಾಗಿ ಖಾಸಗಿಕರಣವಾಗುತ್ತಿದ್ದು, ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ 40,000 ಕ್ಕು ಹೆಚ್ಚು ಸರ್ಕಾರಿ ಶಾಲೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮುಚ್ಚಲು ಹೊರಟಿದೆ.
ಇನ್ನು ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ದಿನೇ ದಿನೇ ಜಾಸ್ತಿಯಾಗುತ್ತಿದೆ.
ಕಷ್ಟಪಟ್ಟು ದುಡಿಯುವ ರೈತರ ಬೆಳೆಗೆ ಬೆಲೆ ಇಲ್ಲದೆ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎಲ್ಲಾ ಸಮಸ್ಯೆಗಳ ವಿರುದ್ಧ ದೇಶದ ವಿದ್ಯಾರ್ಥಿ ಯುವಜನ ಮಹಿಳೆಯರು ಒಗ್ಗಟ್ಟಿನಿಂದ ಭಗತ್ ಸಿಂಗ್ ಕಂಡ ಶೋಷಣೆ ರಹಿತ ಸಮಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಮೇಲೆ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಬಸವರಾಜ್ ವಹಿಸಿದ್ದರು,ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ವಿನೋದ್ ಕುಮಾರ್ ಹಾಗೂ ಕಾರ್ಮಿಕ ಮುಖಂಡರಾದ ಮಹೇಶ್ ಚಿಕಲಪರ್ವಿ ಮತ್ತು ನಂದ ಗೋಪಾಲ್, ಅಂಬಿಕಾ,ಮೌನೇಶ್, ಶಿವು ಕುಮಾರ್, ಬಸವರಾಜ್ ದೇಸಾಯಿ ಮುಂತಾದವರು ಭಾಗವಹಿದರು.

