“ನಗರೀಕರಣದ ಅಬ್ಬರದಲ್ಲಿ ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳನ್ನು ಉಳಿಸಲು ಪ್ರತಿಯೊಬ್ಬ ನಾಗರಿಕರು ಸಂಕಲ್ಪ ಮಾಡಬೇಕು,” ಎಂದು ಪೀಪಲ್ಸ್ ಫಾರ್ ಅನಿಮಲ್ಸ್ (PFA) ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಸವಿತಾ ನಾಗಭೂಷಣ್ ತಿಳಿಸಿದರು.
ವಿಶ್ವ ಗುಬ್ಬಚ್ಚಿ ದಿನದ ಅಂಗವಾಗಿ ಶುಕ್ರವಾರ ನಗರದ ಬೋಗಾದಿಯಲ್ಲಿರುವ ಪೀಪಲ್ಸ್ ಫಾರ್ ಅನಿಮಲ್ಸ್ ಆವರಣದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಹಾಗೂ ಪಕ್ಷಿ ಗೂಡು ಮತ್ತು ನೀರಿನ ಬಟ್ಟಲು ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಗರ ಪ್ರದೇಶಗಳಲ್ಲಿ ಗುಬ್ಬಚ್ಚಿಗಳಿಗೆ ಪೂರಕವಾದ ವಾತಾವರಣ ಇಲ್ಲದಿರುವುದರಿಂದ ಅವು ಕಾಣೆಯಾಗುತ್ತಿವೆ. ಮತ್ತೆ ಅವುಗಳನ್ನು ನಗರಕ್ಕೆ ಆಕರ್ಷಿಸಲು ಸಾರ್ವಜನಿಕರು ಶ್ರಮಿಸಬೇಕು ಎಂದು ಅವರು ಕಳವಳ ವ್ಯಕ್ತಪಡಿಸಿದರು.ಹಿರಿಯ ಪ್ರಾಣಿಕ್ ಹೀಲಿಂಗ್ ಟ್ರೈನರ್ ಬಿ. ವೈಭವ್ ಮಾತನಾಡಿ, “ಹಿಂದಿನ ಕಾಲದಲ್ಲಿ ಮನೆಯ ಛಾವಣಿಗಳಲ್ಲಿ ಗುಬ್ಬಚ್ಚಿಗಳು ಗೂಡು ಮಾಡುತ್ತಿದ್ದವು. ಇಂದು ಅಂತಹ ಸ್ಥಳಾವಕಾಶ ಇಲ್ಲದಿರುವುದರಿಂದ ಕೃತಕ ಗೂಡುಗಳನ್ನು ಅಳವಡಿಸಿ, ಆಹಾರ ಮತ್ತು ನೀರು ಒದಗಿಸುವ ಮೂಲಕ ಮುಂದಿನ ಪೀಳಿಗೆಗೆ ಗುಬ್ಬಚ್ಚಿಗಳನ್ನು ಪರಿಚಯಿಸಬೇಕಿದೆ,” ಎಂದರು.
ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಖಿನ್ನತೆಯಂತಹ ಮಾನಸಿಕ ಕಾಯಿಲೆಗಳು ದೂರವಾಗುತ್ತವೆ. ಪ್ರಾಣಿಗಳೊಂದಿಗಿನ ಒಡನಾಟವು ಮನೆಯಲ್ಲಿ ನಗು ಮತ್ತು ಸಂತೋಷದ ವಾತಾವರಣ ಮೂಡಿಸುತ್ತದೆ,” ಎಂದು ವೈಭವ್ ಸಲಹೆ ನೀಡಿದರು.
ಜೈನ್ ಜೀವ್ ದಯಾ ಚಾರಿಟಿ ವತಿಯಿಂದ ಪಕ್ಷಿ ಪ್ರಿಯರಿಗೆ ಈ ಕೆಳಗಿನ ವಸ್ತುಗಳನ್ನು ಉಚಿತವಾಗಿ ವಿತರಿಸಲಾಯಿತು:
ಮಣ್ಣಿನಿಂದ ತಯಾರಿಸಿದ ಗುಬ್ಬಚ್ಚಿ ಗೂಡುಗಳು.
ಆಹಾರ ನೀಡಲು ಸ್ಟ್ಯಾಂಡ್ ಮಾದರಿಯ ಕಂಟೇನರ್‌ಗಳು.
ನೀರು ಕುಡಿಯಲು ಮಣ್ಣು ಮತ್ತು ಸಿಮೆಂಟ್‌ನಿಂದ ತಯಾರಿಸಿದ ಬಟ್ಟಲುಗಳು.
ಕಾರ್ಯಕ್ರಮದಲ್ಲಿ ಜೈನ್ ಜೀವ್ ದಯಾ ಚಾರಿಟಿಯ ಕೋಕಿಲ ರಮೇಶ್ ಜೈನ್ ಹಾಗೂ ಇತರ ಗಣ್ಯರು ಮತ್ತು ಪಕ್ಷಿ ಪ್ರೇಮಿಗಳು ಉಪಸ್ಥಿತರಿದ್ದರು.

