ರಾಯಚೂರು:
ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಯೋಜನೆಗಳು ಮತ್ತು ಸಾಧನೆಗಳ ಸಮಗ್ರ ಚಿತ್ರಣ ನೀಡುವ ಉದ್ದೇಶದೊಂದಿಗೆ ಹೊರತರಲಾಗಿರುವ ‘ರಾಯಚೂರು ಗ್ರಾಮೀಣಾಭಿವೃದ್ಧಿ ಪತ್ರಿಕೆ’ ಎಂಬ ತ್ರೈಮಾಸಿಕ ಮ್ಯಾಗಜೀನ್ ಅನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ (CEO) ಈಶ್ವರ್ ಕಾಂದೂ ಅವರು ಇಂದು ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಸಿಇಓ ಅವರು, ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ವಿವಿಧ ಇಲಾಖೆಗಳ ಸಾಧನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಈ ಪತ್ರಿಕೆ ಪ್ರಮುಖ ವೇದಿಕೆಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.ಈ ತ್ರೈಮಾಸಿಕ ಪತ್ರಿಕೆಯು ಶಾಲಾ ಮಕ್ಕಳು, ಮಹಿಳೆಯರು, ರೈತರು, ಕಾರ್ಮಿಕರು ಹಾಗೂ ವಿಶೇಷ ಚೇತನರ ಕಲ್ಯಾಣಕ್ಕಾಗಿ ಜಾರಿಯಾಗಿರುವ ಕಾರ್ಯಕ್ರಮಗಳ ಮೇಲೆ ಬೆಳಕು ಚೆಲ್ಲುತ್ತದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ಅಡಿಯಲ್ಲಿ ಸಂಜೀವಿನಿ ಮಾರ್ಟ್, ಅಕ್ಕ-ಕಫೆ, ಕುಕ್ಕುಟ ಮತ್ತು ಮತ್ಯ ಸಂಜೀವಿನಿ ಘಟಕಗಳ ಮೂಲಕ ಮಹಿಳೆಯರಿಗೆ ನೀಡಲಾಗಿರುವ ಆರ್ಥಿಕ ಸ್ವಾವಲಂಬನೆಯ ಕುರಿತು ಪತ್ರಿಕೆಯಲ್ಲಿ ವಿಶೇಷ ಮಾಹಿತಿ ನೀಡಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ 100 ದಿನಗಳ ಉದ್ಯೋಗ ನೀಡುವ ಮೂಲಕ ಆಸ್ತಿ ಸೃಜನೆ ಮಾಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆಯ ಮೂಲಕ ಜಿಲ್ಲೆಯಲ್ಲಿ ಸಾಧಿಸಲಾದ ಪ್ರಗತಿಯನ್ನು ಶ್ಲಾಘಿಸಲಾಗಿದೆ.
“ಜಿಲ್ಲೆಯ ಶಿಕ್ಷಣ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಈ ಪತ್ರಿಕೆ ಪ್ರತಿಬಿಂಬಿಸುತ್ತದೆ. ಮಹಿಳೆಯರಿಗೆ ತರಬೇತಿ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮ ಆದ್ಯತೆಯಾಗಿದೆ.”
— ಈಶ್ವರ್ ಕಾಂದೂ, ಸಿಇಓ, ರಾಯಚೂರು ಜಿಲ್ಲಾ ಪಂಚಾಯತ್.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಹಾಲಸಿದ್ದಪ್ಪ ಪೂಜೇರಿ, ಯೋಜನಾ ನಿರ್ದೇಶಕ ಶರಣಬಸವರಾಜ ಕೆ., ಮುಖ್ಯ ಯೋಜನಾಧಿಕಾರಿ ಡಾ. ಟಿ ರೋಣಿ, ಮುಖ್ಯ ಲೆಕ್ಕಾಧಿಕಾರಿ ವಿಜಯ ಶಂಕರ, ಸಹಾಯಕ ಕಾರ್ಯದರ್ಶಿ ರಾಘವೇಂದ್ರ ಸೇರಿದಂತೆ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *