ಬೆಂಗಳೂರು, ಮಾ.21 : ರಾಜ್ಯಸಭೆ ಹಾಗು ವಿಧಾನ ಪರಿಷತ್‌ಗಳಲ್ಲಿ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಷರತ್ತಿನ ಮೇಲೆ ದಾವಣಗೆರೆ ದಕ್ಷಿಣದ ಕಾಂಗ್ರೆಸ್ ಟಿಕೆಟ್ ಅನ್ನು ಎಸ್.ಎಸ್ ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್‌ಗೆ ಬಿಟ್ಟುಕೊಡಲು ಮುಸ್ಲಿಂ ಸಮಾಜದ ಸಚಿವರು, ಶಾಸಕರು ಹಾಗು ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಶನಿವಾರ ರಾತ್ರಿ ಹತ್ತು ಗಂಟೆಯವರೆಗೂ ಎರಡೂ ಗುಂಪುಗಳ ಸಭೆ ವರಿಷ್ಠರ ಸಮ್ಮುಖದಲ್ಲಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್,

ರಾಜ್ಯ ಉಸ್ತುವಾರಿ ಸುರ್ಜೆವಾಲ ಅವರು ಸಭೆ ನಡೆಸಿದರು. ವರಿಷ್ಠರು ಮುಸ್ಲಿಂ ಸಮುದಾಯದ ಮುಖಂಡರ ಮನವೊಲಿಸು ನಲ್ಲಿ ಯಶಸ್ವಿಯಾಗಿದ್ದು ಸಮರ್ಥ್ ಅವರಿಗೆ ಟಿಕೆಟ್ ಅಂತಿಮವಾಗಿದೆ. ಒಂದು ಮೂಲಗಳ ಪ್ರಕಾರ ಸಮರ್ಥ್ ಅವರಿಗೆ ಬಿ ಫಾರಂ ನೀಡಲಾಗಿದೆ ಎನ್ನಲಾಗಿದ್ದು, ಸೋಮವಾರ ನಾಮಪತ್ರ ಸಲ್ಲಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಸಚಿವರಾದ ಜಮೀರ್ ಅಹ್ಮದ್‌, ಎಸ್.ಎಸ್. ಮಲ್ಲಿಕಾರ್ಜುನ್, ಭೈರತಿ ಸುರೇಶ್, ಶಾಸಕರಾದ ಹ್ಯಾರಿಸ್, ರಿಜ್ವಾನ್, ಹರ್ಷದ್ ಮುಂತಾದವರು ಭಾಗವಹಿಸಿದ್ದರು.

ಭಾನುವಾರ ಬೆಳಿಗ್ಗೆ ದಾವಣಗೆರೆ ದಕ್ಷಿಣ ಹಾಗು ಬಾಗಲಕೋಟೆ ಕ್ಷೇತ್ರಗಳ ಆಯ್ಕೆಯನ್ನು ಅಭ್ಯರ್ಥಿಗಳ ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ವಸತಿ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಅಲ್ಪ ಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಜಮೀರ್ ಅಹ್ಮದ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯನ್ನೂ ಹಾಕಿದ್ದರೆನ್ನಲಾಗಿದೆ.

ಇನ್ನೊಂದೆಡೆ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವರು ಎಸ್.ಎಸ್.ಮಲ್ಲಿಕಾರ್ಜುನ್ ಪುತ್ರ ಸಮರ್ಥ್ಗೆ ಟಿಕೆಟ್ ನೀಡುವಂತೆ ಬಿಗಿ ಪಟ್ಟು ಹಾಕಿದ್ದರು.

ಉಭಯ ಮುಖಂಡರು ಶನಿವಾರ ರಾತ್ರಿ ಒಂದು ಒಪ್ಪಂದಕ್ಕೆ ಬಂದಿದ್ದು ಅಭ್ಯರ್ಥಿಗಳನ್ನು ಅಂತಿಮಗೊಳಿಸುವಲ್ಲಿ ವರಿಷ್ಠರು ಸಫಲರಾದರು ಎನ್ನಲಾಗಿದೆ. ಮುಂಬರುವ ರಾಜ್ಯಸಭೆ `ಮತ್ತು ವಿಧಾನ ಪರಿಷತ್‌ಗಳಲ್ಲಿ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ನೀಡಬೇಕೆಂಬ ಷರತ್ತಿನ ಮೇಲೆ ಸಮಸ್ಯೆ ಬಗೆಹರಿದಿದೆ ಎಂದು ತಿಳಿದು ಬಂದಿದೆ.

ಬಾಗಲಕೋಟೆ ಕ್ಷೇತ್ರದಲ್ಲಿ ಹೆಚ್.ವೈ. ಮೇಟಿ ಅವರ ಪುತ್ರ ಉಮೇಶ್ ಮೇಟಿಗೆ ಟಿಕೆಟ್ ಅಂತಿಮ ಗೊಳಿಸಲಾಗಿದೆ.

Leave a Reply

Your email address will not be published. Required fields are marked *