ರಾಯಚೂರು: ಜಿಲ್ಲಾಡಳಿತದ ವತಿಯಿಂದ ಮಾರ್ಚ್ 31ರಂದು ಹಮ್ಮಿಕೊಳ್ಳಲಿರುವ ಭಗವಾನ್ ಮಹಾವೀರ ಜಯಂತಿಯನ್ನು ಜಿಲ್ಲೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಶಿವಾನಂದ ಭಜಂತ್ರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಮಹಾವೀರ ಜಯಂತಿ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಂದು ಮಹಾವೀರ ಅವರ ಭಾವಚಿತ್ರಕ್ಕೆ ಪುಷ್ಪಹಾರ ಸಮರ್ಪಣೆ ಹಾಗೂ ಪುಷ್ಪ ನಮನ ಸಲ್ಲಿಸಲಾಗುವುದು, ಬೆಳಿಗ್ಗೆ 8.30ಕ್ಕೆ ನಗರದ ಜೈನ್ ಮಂದಿರದಿಂದ ಮೆರವಣಿಗೆ ಆರಂಭವಾಗಲಿದ್ದು, ತೀನ್ ಕಂದಿಲ್ ಮತ್ತು ಮಹಾವೀರ ವೃತ್ತದ ಮಾರ್ಗವಾಗಿ ಸಾಗಿ ಪುನಃ ಜೈನ್ ಮಂದಿರಕ್ಕೆ ಬಂದು ತಲುಪಲಿದೆ, ಬೆಳಿಗ್ಗೆ 11 ಗಂಟೆಗೆ ಜೈನ್ ಮಂದಿರದ ಆರಾಧನ ಸಭಾ ಭವನದಲ್ಲಿ ಅಧಿಕೃತ ವೇದಿಕೆ ಕಾರ್ಯಕ್ರಮ ಜರುಗಲಿದೆ.
ಮಹಾವೀರ ವೃತ್ತಕ್ಕೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಬೇಕು.
ಮೆರವಣಿಗೆಯ ಹಾದಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ರಥದ ಸಿದ್ಧತೆ ಹಾಗೂ ಜೈನ್ ಮಂದಿರದ ಸುತ್ತಮುತ್ತ ನೈರ್ಮಲ್ಯ ಕಾಪಾಡುವ ಜವಾಬ್ದಾರಿಯನ್ನು ರಾಯಚೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ನಿರ್ವಹಿಸಬೇಕು.ಯಾವುದೇ ಲೋಪದೋಷಗಳಿಲ್ಲದೆ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಎಡಿಸಿ ತಿಳಿಸಿದರು.
ಮಹಾವೀರರ ತತ್ತ್ವಗಳು ಮತ್ತು ಸಂದೇಶಗಳನ್ನು ಸಾರುವ ನಿಟ್ಟಿನಲ್ಲಿ ಈ ಜಯಂತಿಯನ್ನು ಶಿಸ್ತುಬದ್ಧವಾಗಿ ಆಚರಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ತಕ್ಷಣವೇ ಪೂರೈಸಬೇಕು.”
— ಶಿವಾನಂದ ಭಜಂತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿಗಳು.
ಸಭೆಯ ಆರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಅವರು ಎಲ್ಲರನ್ನು ಸ್ವಾಗತಿಸಿದರು. ಸಭೆಯಲ್ಲಿ ಪ್ರಮುಖರಾದ ಮಹಾವೀರ ಹಾರದಾರ, ಅಶೋಕ ಲೋದಾ, ಎಸ್.ಎಸ್.ಜೈನ್ ಸಾವ್, ಗೌತಮಿ ಗಿಯ್, ರಾಜೇಂದ್ರ ಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *