ಬಳಗಾನೂರು: ಬಳಗಾನೂರು ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಹುಸೇನ್ ಬಾಷಾ ಬೂದುಗುಂಪ ಅವರಿಗೆ ಪಟ್ಟಣದ ಅವರ ನಿವಾಸದಲ್ಲಿ ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜು ಸಿಂಧನೂರಿನ ಅಧ್ಯಕ್ಷರಾದ ಶ್ರೀ ಇರ್ಫಾನ್ ಕೆ ಹಾಗೂ ಅವರ ಸಹೋದರರು ಭೇಟಿ ನೀಡಿ ಹಾರ್ದಿಕವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆತ್ಮೀಯ ಹಾಗೂ ಭಾವನಾತ್ಮಕ ವಾತಾವರಣ ನಿರ್ಮಾಣವಾಗಿದ್ದು, ಹೂಮಾಲೆ ಹಾಕಿ, ಶಾಲು ಹೊದಿಸಿ ಸಿಹಿ ತಿನ್ನಿಸಿ ಗೌರವ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಸನ್ ರೈಸ್ ಕಾಲೇಜಿನ ಅಧ್ಯಕ್ಷರಾದ ಇರ್ಫಾನ್ ಕೆ ಅವರು, “ಸಣ್ಣ ವಯಸ್ಸಿನಲ್ಲಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಹುಸೇನ್ ಬಾಷಾ ಅವರು ಅನೇಕ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಜೀವನದ ಏರುಪೇರುಗಳನ್ನು ಸಮರ್ಥವಾಗಿ ನಿಭಾಯಿಸಿ ಇಂದು ಈ ಮಟ್ಟಕ್ಕೆ ಏರಿದ್ದಾರೆ. ಅವರ ಈ ಸಾಧನೆ ಕೇವಲ ವ್ಯಕ್ತಿಗತ ಜಯವಲ್ಲ, ಸಂಪೂರ್ಣ ಸಮಾಜದ ಹೆಮ್ಮೆ. ಅವರ ಪರಿಶ್ರಮ, ತಾಳ್ಮೆ ಮತ್ತು ಜನಸೇವೆ ಮಾಡುವ ಮನೋಭಾವವೇ ಇವರನ್ನು ಈ ಸ್ಥಾನಕ್ಕೆ ತಂದಿದೆ,” ಎಂದು ಹೇಳಿದರು.
ಇನ್ನೂ ಮುಂದುವರೆದು ಮಾತನಾಡಿದ ಅವರು,“ಹುಸೇನ್ ಬಾಷಾ ಅವರು ಸದಾ ಬಡವರ, ದೀನ ದಲಿತರ ಹಾಗೂ ಹಿಂದುಳಿದವರ ಪರ ನಿಂತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಹೃದಯವಂತ ನಾಯಕ. ಅವರ ಮನಸ್ಸಿನಲ್ಲಿ ಇರುವ ಮಾನವೀಯತೆ, ಸಹಾನುಭೂತಿ ಮತ್ತು ಸೇವಾ ಮನೋಭಾವ ರಾಜಕೀಯದಲ್ಲಿ ಅಪರೂಪ. ಇಂತಹ ನಾಯಕರು ಸಮಾಜಕ್ಕೆ ಅಗತ್ಯ. ಅವರು ಇನ್ನೂ ಉನ್ನತ ಸ್ಥಾನಗಳಿಗೆ ಏರಿ ಸಮಾಜ ಸೇವೆಯನ್ನು ಇನ್ನಷ್ಟು ವಿಸ್ತರಿಸಲಿ. ಅವರ ಸಾಧನೆಯ ಪಯಣ ಹೀಗೆ ಮುಂದುವರಿಯಲಿ,” ಎಂದು ಹಾರೈಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಉಪಾಧ್ಯಕ್ಷರಾದ ಹುಸೇನ್ ಬಾಷಾ ಬೂದುಗುಂಪ ಅವರು ಭಾವೋದ್ರಿಕ್ತವಾಗಿ ಪ್ರತಿಕ್ರಿಯಿಸಿ, “ನಮ್ಮ ಆತ್ಮೀಯ ಸಹೋದರರಾದ ಇರ್ಫಾನ್ ಕೆ ಹಾಗೂ ಅವರ ಜೊತೆಗಿನ ಎಲ್ಲರು ಇಂದು ನಮ್ಮ ಮನೆಗೆ ಬಂದು ನನಗೆ ನೀಡಿದ ಈ ಗೌರವ, ಪ್ರೀತಿ ಮತ್ತು ಆಶೀರ್ವಾದ ನನ್ನ ಜೀವನದಲ್ಲಿ ಮರೆಯಲಾರದ ಕ್ಷಣವಾಗಿದೆ. ನಿಮ್ಮಂತಹ ಆತ್ಮೀಯರ ಬೆಂಬಲವೇ ನನ್ನ ಶಕ್ತಿ. ಈ ಸನ್ಮಾನ ನನ್ನ ಮೇಲೆ ಇನ್ನಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ,” ಎಂದು ಹೇಳಿದರು.
ಅವರು ಮುಂದುವರೆದು, “ನಾನು ಈ ಸ್ಥಾನವನ್ನು ಒಂದು ಗೌರವವಾಗಿ ಮಾತ್ರವಲ್ಲ, ಸೇವೆಯ ಅವಕಾಶವಾಗಿ ನೋಡುತ್ತೇನೆ. ಬಡವರ ಕಣ್ಣೀರು ಒರೆಸುವ ಕೆಲಸ, ನಿರ್ಗತಿಕರಿಗೆ ನೆರವಾಗುವ ಕಾರ್ಯ, ಸಮಾಜದ ಅಭಿವೃದ್ಧಿಗೆ ಶ್ರಮಿಸುವುದು ನನ್ನ ಮುಖ್ಯ ಗುರಿ. ನಿಮ್ಮ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಿ ಸಮಾಜದ ಋಣ ತೀರಿಸಲು ಸದಾ ಪ್ರಯತ್ನಿಸುತ್ತೇನೆ. ನೀವು ತೋರಿದ ಪ್ರೀತಿ ಮತ್ತು ನಂಬಿಕೆ ನನ್ನನ್ನು ಇನ್ನಷ್ಟು ಸೇವೆಯ ದಾರಿಗೆ ಮುನ್ನಡೆಯಲು ಪ್ರೇರೇಪಿಸುತ್ತದೆ,” ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ಸನ್ ರೈಸ್ ಕಾಲೇಜಿನ ಅಧ್ಯಕ್ಷರಾದ ಇರ್ಫಾನ್ ಕೆ, ಮತ್ತಣ್ಣ, ಮಹಮ್ಮದ್, ಇಸಾಕ್, ಸಮೀರ್, ಉಮೇರ, ಅಲಿ, ಮೂಸಾ, ಅಫ್ಮಾನ್, ರಿಯಾಜ್, ದಾವುದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಶುಭಾಶಯಗಳನ್ನು ಅರ್ಪಿಸಿದರು. ಕಾರ್ಯಕ್ರಮವು ಆತ್ಮೀಯತೆ, ಸ್ನೇಹ ಹಾಗೂ ಭಾವೈಕ್ಯತೆಯ ಸಂಕೇತವಾಗಿ ಮೂಡಿಬಂದಿತು.

Leave a Reply

Your email address will not be published. Required fields are marked *