ಬಳಗಾನೂರು: ಮಾ.21ರಂದು ಪಟ್ಟಣದಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಎಲ್ಲಾ ಮುಸ್ಲಿಂ ಬಾಂಧವರು ಸೇರಿ ಅತ್ಯಂತ ಸಂಭ್ರಮ, ಶಾಂತಿ ಹಾಗೂ ಭಕ್ತಿಭಾವದಿಂದ ಅದ್ದೂರಿಯಾಗಿ ಆಚರಣೆ ಮಾಡಿದರು. ಹಬ್ಬದ ಅಂಗವಾಗಿ ಪಟ್ಟಣದ ಜಾಮಿಯಾ ಮಸೀದಿ, ಖೂಬಾ ಮಸೀದಿ ಹಾಗೂ ಶಾಹಿ ಜಾಮಿಯಾ ಮಸೀದಿಯಿಂದ ಬೆಳಿಗ್ಗೆ 9 ಗಂಟೆಗೆ ಮುಸ್ಲಿಂ ಬಾಂಧವರು ಪಾದಯಾತ್ರೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ, ಬೆಳಿಗ್ಗೆ 9:30ಕ್ಕೆ ತಲುಪಿದರು. ನಂತರ ಮೌಲಾನಾ ಹುಸೇನ್ ಬಾಷಾ ಮುಲ್ಲಾ ಅವರ ನೇತೃತ್ವದಲ್ಲಿ ಸಮೂಹ ಪ್ರಾರ್ಥನೆ ಭಕ್ತಿಪೂರ್ವಕವಾಗಿ ನೆರವೇರಿತು.
ಪ್ರಾರ್ಥನೆಯ ಬಳಿಕ ಮಾತನಾಡಿದ ಮೌಲಾನಾ ಮಹಿಮೂದ್ ಬಾಷಾ ಮುಲ್ಲಾ ಅವರು, ರಂಜಾನ್ ಹಬ್ಬದ ಮಹತ್ವವನ್ನು ವಿವರಿಸಿ, ಇದು ಕೇವಲ ಹಬ್ಬವಲ್ಲ; ಮಾನವೀಯತೆ, ಸಹಾನುಭೂತಿ, ತ್ಯಾಗ ಮತ್ತು ದಾನಧರ್ಮದ ಸಂದೇಶವನ್ನು ಸಾರುವ ಪವಿತ್ರ ಸಮಯವಾಗಿದೆ ಎಂದು ಹೇಳಿದರು. ಸಮಾಜದಲ್ಲಿ ಎಲ್ಲರೂ ಪರಸ್ಪರ ಪ್ರೀತಿ, ಸಹೋದರತ್ವ ಮತ್ತು ಕರುಣೆಯಿಂದ ನಡೆದುಕೊಳ್ಳಬೇಕು. ಬಡವರನ್ನು, ನಿರ್ಗತಿಕರನ್ನು ಮರೆಯದೆ ಅವರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಬೇಕು ಎಂದು ಕರೆ ನೀಡಿದರು. ಧರ್ಮವು ಯಾರನ್ನೂ ಬೇರ್ಪಡಿಸುವುದಿಲ್ಲ; ಬಡ-ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರನ್ನು ಒಂದೇ ಸಾಲಿನಲ್ಲಿ ನಿಲ್ಲಿಸುವ ಮಹತ್ವದ ಸಂದೇಶವನ್ನು ನೀಡುತ್ತದೆ ಎಂದು ತಿಳಿಸಿದರು.
ಅವರು ಈದ್ ಉಲ್ ಫಿತರ್ ಹಬ್ಬದ ಆಧ್ಯಾತ್ಮಿಕ ಅರ್ಥವನ್ನು ವಿವರಿಸಿ, ಉಪವಾಸದ ಮೂಲಕ ವ್ಯಕ್ತಿ ತನ್ನ ಆತ್ಮಶುದ್ಧಿಯನ್ನು ಸಾಧಿಸುತ್ತಾನೆ. ಉಪವಾಸವು ಶರೀರಕ್ಕೆ ಮಾತ್ರವಲ್ಲ, ಮನಸ್ಸಿಗೂ ನಿಯಂತ್ರಣ ನೀಡುತ್ತದೆ. ದಾನಧರ್ಮ, ಜಕಾತ್ ಹಾಗೂ ಸಹಾಯ ಮನೋಭಾವದಿಂದ ಸಮಾಜದಲ್ಲಿ ಶಾಂತಿ ಮತ್ತು ಸಮಾನತೆ ನೆಲೆಸುತ್ತದೆ ಎಂದು ಹೇಳಿದರು. ಪ್ರತಿಯೊಬ್ಬರೂ ತಮ್ಮ ನೆರೆಯವರೊಂದಿಗೆ ಪ್ರೀತಿ ಹಂಚಿಕೊಂಡು ಹಬ್ಬವನ್ನು ಆಚರಿಸಿದಾಗ ಮಾತ್ರ ಹಬ್ಬದ ಸಾರ್ಥಕತೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮೊನ್ನೆ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಹುಸೇನ್ ಬಾಷಾ ಬೂದಗುಂಪ ಅವರಿಗೆ ಎಲ್ಲಾ ಸಮಾಜದ ಹಿರಿಯರು, ಗಣ್ಯರು ಹಾಗೂ ಮುಖಂಡರು ಸೇರಿ ಅಭಿನಂದನೆ ಸಲ್ಲಿಸಿ ಗೌರವಿಸಿದರು. ಮಾತನಾಡಿದ ಉಪಾಧ್ಯಕ್ಷರಾದ ಹುಸೇನ್ ಬಾಷಾ ಬೂದಗುಂಪ ಅವರು, ನಮ್ಮ ಸಮಾಜಕ್ಕೆ ಉಪಾಧ್ಯಕ್ಷ ಸ್ಥಾನ ಸಿಕ್ಕಿರುವುದು ಹೆಮ್ಮೆಯ ಸಂಗತಿ. ನನಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಬಡವರ, ನಿರ್ಗತಿಕರ ಸೇವೆಗೆ ಸದಾ ಸಿದ್ಧನಾಗಿದ್ದು, ನನ್ನ ಕೈಲಾದಷ್ಟು ದಾನಧರ್ಮ ಮಾಡಿ ಸಮಾಜದ ಋಣ ತೀರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಎಲ್ಲ ವರ್ಗದ ಜನರ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವೆನೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸೂಕ್ತ ಬಂದೋಬಸ್ತ್ ಒದಗಿಸಿದ ಬಳಗಾನೂರು ಪೊಲೀಸ್ ಠಾಣೆಯ ಪಿಎಸ್ಐ ಏರಿಯಪ್ಪ ಅವರಿಗೆ ಮುಸ್ಲಿಂ ಸಮಾಜದ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು. ಹಾಗೆಯೇ ಸಮಾಜದ ಹಬ್ಬಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಸುದ್ದಿಗಳನ್ನು ನಿರಂತರವಾಗಿ ಪ್ರಸಾರ ಮಾಡಿ ಭಾವೈಕ್ಯತೆಯ ಸಂದೇಶವನ್ನು ನಾಡಿಗೆ ತಲುಪಿಸುತ್ತಿರುವ ಪತ್ರಕರ್ತರಾದ ಹನುಮೇಶ್ ಕಮ್ಮಾರ್ ಅವರಿಗೆ ಕೂಡ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೌಲಾನಾ ಹುಸೇನ್ ಬಾಷಾ, ಶೇಕ್ಷಾವಲಿ, ಮೌಲಾನಾ ಶಂಶಿರ ಅಲಿ, ಹಜರತಲಿ, ಯೂಸುಫ್ ಅತ್ತಾರ, ಮೌಲಾನಾ ಖಾದರ್ ಬಾಷಾ, ಮೌಲಾನಾ ಮಹಿಬೂಬ್,ಎಂಡಿ ಆಲಂಬಾಷ ಶಿಕ್ಷಕರು,ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಹುಸೇನ್ ಬಾಷಾ, ಸನ್ ರೈಸ್ ಕಾಲೇಜು ಸಿಂಧನೂರಿನ ಅಧ್ಯಕ್ಷರಾದ ಇರ್ಫಾನ್ ಕೆ ,, ರಿಯಾಜ್ ನಾಯಕ್, ಅಬಿದಲಿ ಶಿಕ್ಷಕರು, ಹುಸೇನ್ ಬಾಷಾ ಶಿಕ್ಷಕರು,ಹಾಗೂ ಜಾಮಿಯಾ ಮಸೀದಿ, ಖೂಬಾ ಮಸೀದಿ ಮತ್ತು ಶಾಹಿ ಜಾಮಿಯಾ ಮಸೀದಿಯ ಮುಖಂಡರು, ಯುವಕರು ಹಾಗೂ ಮುದ್ದು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
ಒಟ್ಟಿನಲ್ಲಿ, ಬಳಗಾನೂರಿನಲ್ಲಿ ರಂಜಾನ್ ಹಬ್ಬವು ಧಾರ್ಮಿಕ ಭಾವನೆಗಳ ಜೊತೆಗೆ ಸಾಮಾಜಿಕ ಐಕ್ಯತೆ, ಮಾನವೀಯತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರಿದಂತಾಯಿತು. ಹಬ್ಬದ ಸಂದರ್ಭದಲ್ಲಿ ಎಲ್ಲ ಸಮುದಾಯದ ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಶಾಂತಿ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸಿದರು.

Leave a Reply

Your email address will not be published. Required fields are marked *