ಮುದ್ದೇಬಿಹಾಳ: ಪಟ್ಟಣದ ತಾಳಿಕೋಟೆ ರಸ್ತೆಯ ಈದ್ಗಾ ಮೈದಾನದಲ್ಲಿ ರಮಜಾನ್ ತಿಂಗಳ ಅಂಗವಾಗಿ ಈದ್ ಉಲ್ ಫಿತ್ರ್ ಹಬ್ಬದ ವಿಶೇಷ ನಮಾಜ್ ಭಕ್ತಿಭಾವದಿಂದ ನೆರವೇರಿತು.
ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಮುಸ್ಲಿಂ ಬಾಂಧವರು ಆಗಮಿಸಿ, ಶಾಂತಿ, ಸೌಹಾರ್ದತೆ ಮತ್ತು ಭಕ್ತಿಯ ವಾತಾವರಣದಲ್ಲಿ ನಮಾಜ್ ಸಲ್ಲಿಸಿದರು. ಬೆಳಗ್ಗಿನ ಜಾವದಿಂದಲೇ ಈದ್ಗಾ ಮೈದಾನದಲ್ಲಿ ಜನಸಂದಣಿ ಹೆಚ್ಚಾಗಿ, ಹಬ್ಬದ ಸಂಭ್ರಮ ಕಂಗೊಳಿಸುತ್ತಿತ್ತು.
ನಮಾಜ್ ನಂತರ ಜಾಮಿಯಾ ಮಸೀದಿಯ ಇಮಾಮ್ ಹಾಗೂ ಖತೀಬ್ ಮೌಲಾನಾ ಮುಫ್ತಿ ಅಫ್ತಾಬ್ ಆಲಂ ಮಾತನಾಡಿ, ಸಮಾಜದ ಏಕತೆ ಮತ್ತು ಪ್ರಗತಿಯ ಮಹತ್ವವನ್ನು ವಿವರಿಸಿದರು. ಈದ್ ಹಬ್ಬವು ಕೇವಲ ಆಚರಣೆಯಲ್ಲ, ಪ್ರೀತಿ, ಸಹೋದರತ್ವ ಮತ್ತು ವೈಷಮ್ಯಗಳನ್ನು ದೂರ ಮಾಡುವ ಸಂದೇಶ ಸಾರುವ ಹಬ್ಬವಾಗಿದೆ ಎಂದು ಹೇಳಿದರು.
ಇಂದಿನ ಸಮಾಜ ಒಳಜಗಳಗಳಿಂದ ಬಳಲುತ್ತಿರುವುದು ವಿಷಾದನೀಯ ಸಂಗತಿ. ದೊಡ್ಡ ಸಮಸ್ಯೆಗಳನ್ನು ಎದುರಿಸುವ ಮೊದಲು ಕುಟುಂಬ ಹಾಗೂ ಸಮುದಾಯದ ಒಳಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವುದು ಅಗತ್ಯ ಎಂದು ಅವರು ಕರೆ ನೀಡಿದರು.
ಶಿಕ್ಷಣದ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ ಅವರು, ಪೋಷಕರು ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಜೊತೆಗೆ ಪ್ರಪಂಚಿಕ ಶಿಕ್ಷಣವನ್ನೂ ನೀಡಬೇಕು ಎಂದು ಸಲಹೆ ನೀಡಿದರು. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಕಾತ್ ಸೇರಿದಂತೆ ವಿವಿಧ ನೆರವುಗಳ ಮೂಲಕ ಉತ್ತೇಜನ ನೀಡಲು ಸ್ಥಳೀಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸುವ ಅಗತ್ಯವಿದೆ ಎಂದರು.
ಶಿಕ್ಷಣದ ಕೊರತೆಯಿಂದ ಸಮುದಾಯದ ಪ್ರತಿನಿಧಿತ್ವ ಕುಂಠಿತವಾಗಿರುವುದನ್ನು ಉಲ್ಲೇಖಿಸಿ, ಹೆಚ್ಚಿನ ವಿದ್ಯಾವಂತರಾದರೆ ಸಮಾಜದ ಸಮಸ್ಯೆಗಳಿಗೆ ಸಮರ್ಪಕ ಧ್ವನಿ ದೊರೆಯುತ್ತದೆ ಎಂದು ಹೇಳಿದರು.
ಕೊನೆಯಲ್ಲಿ ಅವರು ಪ್ರಾರ್ಥನೆ ಸಲ್ಲಿಸಿ, ಸಮಾಜದಲ್ಲಿ ಶಾಂತಿ, ಏಕತೆ ನೆಲೆಸಲಿ ಹಾಗೂ ಸನ್ಮಾರ್ಗದಲ್ಲಿ ಎಲ್ಲರೂ ಸಾಗಲಿ ಎಂದು ಹಾರೈಸಿದರು.
ನಮಾಜ್ ನಂತರ ಪರಸ್ಪರ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಹಿರಿಯರು, ಯುವಕರು ಹಾಗೂ ಮಕ್ಕಳು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಕಾರ್ಯಕ್ರಮವು ಶಾಂತಿಯುತವಾಗಿ ನೆರವೇರಿತು.

Leave a Reply

Your email address will not be published. Required fields are marked *