ಮಾನ್ವಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಮಾತನಾಡಿ, ತುಂಗಭದ್ರ ಜಲಾಶಯದ ಕ್ರಾಸ್ಟ್ ಗೇಟ್‌ಗಳ ದುರಸ್ಥಿ ಕಾಮಗಾರಿ ಹಿನ್ನೆಲೆ ಕಾಲುವೆಗಳಿಗೆ ನೀರು ಬಿಡಲಾಗಿರಲಿಲ್ಲ. ಆದರೆ ಕುಡಿಯುವ ನೀರಿನ ತುರ್ತು ಅವಶ್ಯಕತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮನವಿಯಂತೆ ಕಾಲುವೆಗೆ ನೀರು ಬಿಡುಗಡೆ ಮಾಡಲಾಗಿದೆ. ನಾಲೆ ಒಡೆದಿರುವ ಪ್ರದೇಶಕ್ಕೆ ಮಸ್ಕಿ ಶಾಸಕ ಬಸವನಗೌಡ ತುರ್ವಿಹಾಳ್ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ತಾತ್ಕಾಲಿಕವಾಗಿ ಮರಳಿನ ಚೀಲಗಳನ್ನು ಬಳಸಿ ನಾಲೆ ದುರಸ್ತಿ ಮಾಡಲಾಗುತ್ತಿದೆ. ನಂತರ ಶಾಶ್ವತ ದುರಸ್ತಿ ಕೈಗೊಳ್ಳಲಾಗುವುದು. ನಾಲೆ ಒಡೆತದಿಂದ ಸುಮಾರು 92 ಎಕರೆ ಬೆಳೆ ನಷ್ಟವಾಗಿದ್ದು, ಕಂದಾಯ ಮತ್ತು ಕೃಷಿ ಇಲಾಖೆ ಸಮೀಕ್ಷೆ ನಡೆಸಿದ್ದು ರೈತರಿಗೆ ಪರಿಹಾರ ನೀಡಲಾಗುವುದು. ಮುಂದಿನ 2–3 ದಿನಗಳಲ್ಲಿ ಕಾಲುವೆ ಮೂಲಕ ರಬ್ಬಣಕಲ್ ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ನೀರಿನ ಕೊರತೆ ಇರುವ ವಾರ್ಡ್‌ಗಳಿಗೆ 5 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುವುದು. ಜೊತೆಗೆ ತುಂಗಭದ್ರ ನದಿಯಿಂದ 3 ಟಿಎಂಸಿ ನೀರನ್ನು ಬಳಸಿಕೊಳ್ಳುವ ಹಾಗೂ ಜಾಕ್‌ವೆಲ್ ಮೂಲಕ ನೀರು ಒದಗಿಸುವ ಕ್ರಮವೂ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ತುಂಗಭದ್ರ ಅಣೆಕಟ್ಟಿನ 33 ಕ್ರಾಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ವೇಗವಾಗಿ ನಡೆಯುತ್ತಿದ್ದು ಇದುವರೆಗೆ 18 ಗೇಟ್‌ಗಳು ಪೂರ್ಣಗೊಂಡಿವೆ, 5 ಗೇಟ್‌ಗಳ ಕೆಲಸ ಪ್ರಗತಿಯಲ್ಲಿದೆ. ಏಪ್ರೀಲ್ ಕೊನೆಯೊಳಗೆ ಎಲ್ಲಾ ಗೇಟ್‌ಗಳ ದುರಸ್ಥಿ ಪೂರ್ಣಗೊಳ್ಳಲಿದೆ. ರೈತರು ವದಂತಿಗಳಿಗೆ ತುತ್ತಾಗಬಾರದು, ಈ ಬಾರಿ ಬೆಳೆಗಳಿಗೆ ನೀರು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಾಪೂರ್ ಸಾಬ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಿ.ಕೆ. ಅಂಬರೇಶಪ್ಪ, ಜಿ. ನಾಗರಾಜ್, ಕಿರಿಲಿಂಗಪ್ಪ, ಮಹಾಂತೇಶ್ ಸ್ವಾಮಿ ರೌಡೂರು, ಹೋನ್ನಪ್ಪ ಹೆಳವಾರ್, ಸೈಯಾದ್ ಖಾಲಿದ್ ಖಾದ್ರಿ, ರಾಜಾ ಸುಭಾಷಚಂದ್ರನಾಯಕ, ಹುಸೇನ್ ಬೇಗ್, ಹಿದಾಯತ್ ನಾಯ್ಕ್ ಉಪಸ್ಥಿತರಿದ್ದರು.

