ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿ ದೇವದುರ್ಗ ಪದಾಧಿಕಾರಿಗಳು ಹಾಗೂ ರೈತರಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.

 

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ್ ಅವರು, ನಾರಾಯಣಪುರ ಬಲದಂಡೆ ಕಾಲುವೆಗೆ ಏಪ್ರಿಲ್ 15ರವರೆಗೆ ನೀರು ಹರಿಸಲು ಆಗ್ರಹಿಸಿ ದಿನಾಂಕ 23-03-2026ರಂದು ಜಾಲಹಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 

ನಾರಾಯಣಪುರ ಬಲದಂಡೆ ಕಾಲುವೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಶೇಂಗಾ, ಸಜ್ಜೆ, ಮೆಣಸಿನಕಾಯಿ, ಭತ್ತ ಸೇರಿದಂತೆ ಹಲವು ಬೆಳೆಗಳು ಕಟಾವಿನ ಹಂತದಲ್ಲಿದ್ದು, ರೈತರ ಹಿತದೃಷ್ಟಿಯಿಂದ ನೀರು ಅತ್ಯಾವಶ್ಯಕವಾಗಿದೆ ಎಂದು ಹೇಳಿದರು. ಸರ್ಕಾರ ತಕ್ಷಣ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು ಮತ್ತು ರೈತರ ಬೆಳೆಗಳನ್ನು ರಕ್ಷಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

 

ಇದೇ ವೇಳೆ ಅವರು ಆಲಮಟ್ಟಿ ಡ್ಯಾಂ ಎತ್ತರಿಸುವ ವಿಷಯದ ಕುರಿತು ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳ ತಡೆಯನ್ನೂ ಉಲ್ಲೇಖಿಸಿ, ಎಲ್ಲಾ ಕಾನೂನು ತೊಡಕುಗಳನ್ನು ನಿವಾರಿಸಿ ಡ್ಯಾಂ ಎತ್ತರಿಸುವಂತೆ ಒತ್ತಾಯಿಸಿದರು.

 

ರೈತರಾದ ಸಿದ್ದಪ್ಪ ಗುಮ್ದರ ಅವರು, “ಏಪ್ರಿಲ್ 15ರವರೆಗೆ ನೀರು ಹರಿಸಿದರೆ ಮಾತ್ರ ಬೆಳೆ ಕೈಗೆ ಬರುತ್ತದೆ, ಇಲ್ಲವಾದರೆ ರೈತರಿಗೆ ಸಂಕಷ್ಟ ಎದುರಾಗುತ್ತದೆ” ಎಂದು ತಿಳಿಸಿದರು.

 

ಭೀಮಣ್ಣ ಡಂಗಿ ಅವರು ಮಾತನಾಡಿ, “ಸಾಲ ಮಾಡಿ ಬೆಳೆದ ಬೆಳೆಗಳು ನೀರಿಲ್ಲದೆ ಹಾಳಾದರೆ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

 

ಮಾರ್ಚ್ 23ರಂದು ನಡೆಯುವ ಧರಣಿ ಸತ್ಯಾಗ್ರಹಕ್ಕೆ ರೈತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕು ಎಂದು ರೈತ ಮುಖಂಡರು ಮನವಿ ಮಾಡಿದರು.

 

ಈ ಸಂದರ್ಭದಲ್ಲಿ ನರಸಣ್ಣ ನಾಯಕ್, ಹನುಮಂತ ಗುರಿಕಾರ್, ಮೌನೇಶ್, ಶಿವರಾಜ್ ಯರಕಮಟ್ಟಿ, ಭೀಮಣ್ಣ ಡಂಗಿ, ಹನುಮಂತ ಮಡಿವಾಳ ಸೇರಿದಂತೆ ಹಲವರು ಹಾಗೂ ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *