ರಾಯಚೂರು:
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಬುಧವಾರದಿಂದ ಅತ್ಯಂತ ಶಿಸ್ತುಬದ್ಧವಾಗಿ ಆರಂಭಗೊಂಡಿವೆ. ಜಿಲ್ಲೆಯಾದ್ಯಂತ ತೀವ್ರವಾದ ಬಿಸಿಲಿನ ಝಳವಿದ್ದರೂ ಸಹ, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಉತ್ಸಾಹದಿಂದ ಮೊದಲ ದಿನದ ಪ್ರಥಮ ಭಾಷೆ ಕನ್ನಡ ಪರೀಕ್ಷೆಯನ್ನು ಬರೆದರು.ಜಿಲ್ಲೆಯ ಒಟ್ಟು 101 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆಯಿತು. ಜಿಲ್ಲೆಯಲ್ಲಿ ಒಟ್ಟು 30,958 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು, ಈ ಪೈಕಿ 30,295 ವಿದ್ಯಾರ್ಥಿಗಳು ಹಾಜರಾಗಿದ್ದು, 663 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.
ತಾಲ್ಲೂಕುವಾರು ಹಾಜರಾತಿ ವಿವರ: ರಾಯಚೂರು: 9,110 ಹಾಜರು(215 ಗೈರು), ಲಿಂಗಸುಗೂರು: 6,142 ಹಾಜರು (113 ಗೈರು),ಸಿಂಧನೂರು: 5,597 ಹಾಜರು (87 ಗೈರು), ಮಾನ್ವಿ: 5,413 ಹಾಜರು (170 ಗೈರು), ದೇವದುರ್ಗ: 4,033 ಹಾಜರು (78 ಗೈರು).
ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಮತ್ತು ಶಾಂತಿಯುತವಾಗಿ ಪರೀಕ್ಷೆ ನಡೆಸಲು ಪ್ರತಿ ಕೇಂದ್ರಕ್ಕೂ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ನಕಲು ತಡೆಗೆ ವಿಶೇಷ ನಿಗಾ ವಹಿಸಲಾಗಿದ್ದು, ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಅಧಿಕಾರಿಗಳು ಜಾಗರೂಕತೆಯಿಂದ ಕಾರ್ಯನಿರ್ವಹಿಸಿದರು.ಮಾನ್ವಿ ಪಟ್ಟಣದ ಶಾರದಾ ವಿದ್ಯಾನಿಕೇತನ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಬುಧವಾರ ಬಿಇಒ ಚಂದ್ರಶೇಖರ ದೊಡ್ಡಮನಿ ಅವರು ಭೇಟಿ ನೀಡಿ, ಪರೀಕ್ಷಾ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಜಿಲ್ಲಾದ್ಯಂತ ಪರೀಕ್ಷೆಗಳು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿವೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *