ರಾಯಚೂರು : ಯುಗ ಎಂದರೆ ಕಾಲ, ಆದಿ ಎಂದರೆ ಆರಂಭ’. ಹೊಸ ವರ್ಷದ ಮುನ್ನುಡಿಯಾದ ಯುಗಾದಿ ಹಬ್ಬವನ್ನು ಬರಮಾಡಿಕೊಳ್ಳಲು ರಾಯಚೂರು ನಗರ ಸಜ್ಜಾಗಿದ್ದು, ಬೆಲೆ ಏರಿಕೆಯ ನಡುವೆಯೂ ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿ ಭರಾಟೆ ಜೋರಾಗಿದೆ.ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಹಣ್ಣು ಮತ್ತು ಹೂವುಗಳ ದರವನ್ನು ದುಪ್ಪಟ್ಟುಗೊಳಿಸಿದ್ದಾರೆ. ಪ್ರಮುಖವಾಗಿ ಹಣ್ಣುಗಳ ದರ ಗಗನಕ್ಕೇರಿದ್ದು, ಸೇಬು ಮತ್ತು ದಾಳಿಂಬೆ ಕೆ.ಜಿಗೆ ₹300 ತಲುಪಿದೆ. ದ್ರಾಕ್ಷಿ ₹160, ಸಂತ್ರ ₹200 ಹಾಗೂ ಮಾವಿನ ಕಾಯಿ ₹50ಕ್ಕೆ ಮಾರಾಟವಾಗುತ್ತಿದೆ. ಹೂವಿನ ಮಾರುಕಟ್ಟೆಯಲ್ಲೂ ಸೇವಂತಿಗೆ ಕೆ.ಜಿಗೆ ₹400ರ ಗಡಿ ದಾಟಿದ್ದರೆ, ಕನಕಾಂಬರ ಮತ್ತು ಮಲ್ಲಿಗೆ ಹೂವುಗಳ ದರವೂ ಏರಿಕೆಯಾಗಿದೆ. ಹಬ್ಬದ ಅನಿವಾರ್ಯತೆಯಿಂದಾಗಿ ಗ್ರಾಹಕರು ಚೌಕಾಶಿ ಮಾಡಿ ವಸ್ತುಗಳನ್ನು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.ತೆಂಗಿನಕಾಯಿ ₹20-25, ಬಾಳೆಹಣ್ಣು (ಡಜನ್) ₹50, ಕಲ್ಲಂಗಡಿ ₹30-50, ಸಪೋಟ ₹80.,ಬೇವು-ಬೆಲ್ಲದ ಪ್ಯಾಕೇಟ್ ₹20, ಕಲ್ಲು ಸಕ್ಕರೆ ₹20,ಗೋಡಂಬಿ (100ಗ್ರಾಂ) ₹110, ಬಾದಾಮಿ ₹90, ಉತ್ತುತ್ತಿ ₹100.
ನಗರದ ಪ್ರಮುಖ ಕೇಂದ್ರಗಳಾದ ಚಂದ್ರಮೌಳೇಶ್ವರ ವೃತ್ತ, ಗಾಂಧಿ ವೃತ್ತ, ತೀನ್ ಕಂದಿಲ್ ಹಾಗೂ ಉಸ್ಮಾನಿಯಾ ಮಾರುಕಟ್ಟೆಗಳಲ್ಲಿ ಕಳೆದ ಎರಡು ದಿನಗಳಿಂದ ಜನಸಾಗರವೇ ಹರಿದುಬರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಸ್ವಲ್ಪ ಮಟ್ಟಿಗೆ ಕಂಗಾಲಾಗಿದ್ದರೂ, ಹಬ್ಬದ ಸಂಭ್ರಮಕ್ಕೆ ಮಾತ್ರ ಯಾವುದೇ ಕೊರತೆ ಕಂಡುಬಂದಿಲ್ಲ.
ಯುಗಾದಿ ಎರಡು ದಿನಗಳ ಹಬ್ಬವಾಗಿದ್ದು, ಮೊದಲ ದಿನ ಸಿಹಿ ಖಾದ್ಯಗಳಿಗೆ ಪ್ರಾಮುಖ್ಯತೆ ನೀಡಿದರೆ, ಎರಡನೇ ದಿನ ‘ಹೊಸ ತೊಡಕು’ ಆಚರಿಸಲಾಗುತ್ತದೆ. ಈ ವೇಳೆ ರಾಯಚೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಾಂಸದ ಅಡುಗೆಗಳ ವಿಜೃಂಭಣೆ ಇರಲಿದ್ದು, ಮಾಂಸ ಹಾಗೂ ತರಕಾರಿಗಳ ದರವೂ ಏರಿಕೆಯಾಗುವ ಸಾಧ್ಯತೆಯಿದೆ,” ಎಂದು ತರಕಾರಿ ವರ್ತಕ ರಾಮು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಬೆಲೆ ಏರಿಕೆಯ ಬಿಸಿಯು ಖರೀದಿ ಅಬ್ಬರಕ್ಕೆ ಸ್ವಲ್ಪ ತಡೆಯೊಡ್ಡಿದ್ದರೂ, ನಗರದಾದ್ಯಂತ ಯುಗಾದಿಯ ಹೊಸ ಚೇತನ ಕಳೆಗಟ್ಟಿದೆ.

Leave a Reply

Your email address will not be published. Required fields are marked *