ರಾಯಚೂರು : ಮಂತ್ರಾಲಯ- ಪವಿತ್ರ ಕ್ಷೇತ್ರ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಶ್ರೀ ಕ್ರೋಧಿ ನಾಮ ಸಂವತ್ಸರದ ಯುಗಾದಿ ಹಬ್ಬವನ್ನು ಅತ್ಯಂತ ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಯುಗಾದಿಯ ಅಂಗವಾಗಿ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀಮಠದ ಪರಂಪರೆಯಂತೆ ಮೂಲ ರಾಮದೇವರಿಗೆ ಶ್ರೀ ಸುಬುಧೇಂದ್ರ ತೀರ್ಥರು ತೈಲ ಅಭ್ಯಂಗನ ನೆರವೇರಿಸಿ, ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಿದರು.ಹೊಸ ವರ್ಷದ ಶುಭಾರಂಭದ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಗೋ ಪೂಜೆ ಮತ್ತು ತುಳಸಿ ಪೂಜೆಯನ್ನು ವಿಧಿಬದ್ಧವಾಗಿ ನಡೆಸಲಾಯಿತು.ಮಂತ್ರಾಲಯದ ಪ್ರಾಣದೇವರು, ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಹಾಗೂ ಮಠದ ಇತರೆ ಯತಿಗಳ ಬೃಂದಾವನಗಳಿಗೂ ತೈಲ ಅಭ್ಯಂಗನ ಮತ್ತು ಮಹಾ ಮಂಗಳಾರತಿಯನ್ನು ಅರ್ಪಿಸಲಾಯಿತು.ನಂತರ ಶ್ರೀ ಮಠದ ಆಸ್ಥಾನ ವಿದ್ವಾಂಸರಿಂದ ಪಂಚಾಂಗ ಶ್ರವಣ ಜರುಗಿತು. ಈ ಸಂದರ್ಭದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳು, “ಹೊಸ ವರ್ಷವು ಸರ್ವ ಜನರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ರಾಯರ ಅನುಗ್ರಹದಿಂದ ಲೋಕದ ಕಲ್ಯಾಣವಾಗಲಿ,” ಎಂದು ಹಾರೈಸಿ ಆಶೀರ್ವದಿಸಿದರು. ಇದೇ ವೇಳೆ ಶ್ರೀಗಳಿಗೂ ತೈಲ ಅಭ್ಯಂಗನ ಹಾಗೂ ನಾರೀಕೃತ ನೀರಾಜನ ಸೇವೆಗಳನ್ನು ಭಕ್ತಿಪೂರ್ವಕವಾಗಿ ಸಲ್ಲಿಸಲಾಯಿತು.ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ದೇಶದ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು. ಭಕ್ತಾದಿಗಳಿಗೆ ಮಠದ ವತಿಯಿಂದ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಭಕ್ತರು ರಾಯರ ದರ್ಶನ ಪಡೆದು ಪುನೀತರಾದರು.

Leave a Reply

Your email address will not be published. Required fields are marked *