ಲಿಂಗಸುಗೂರು,ಮಾ. 15: ಸಾರ್ವಜನಿಕರು ಯಾವುದೇ ಜ್ವರವಿರಲಿ, ಮೊದಲು ರಕ್ತಲೇಪನ ಪರೀಕ್ಷೆ ಮಾಡಿಸಬೇಕು. ಇದರಿಂದ ಮಲೇರಿಯಾ ಸೇರಿದಂತೆ ಸೋಂಕಿತ ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸಾಧ್ಯವಾಗುವುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಮಲೇರಿಯಾ ರೋಗ ನಿಯಂತ್ರಣಾಧಿಕಾರಿ, ಡಾ ಗಣೇಶ ಕೆ, ಜನತೆಗೆ ಮನವಿ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಲಿಂಗಸೂಗೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಈಚನಾಳ ಯ ಮೂಲಕ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ, ಅಡವಿಬಾವಿ ಹಾಗೂ ಅಡವಿಯಲ್ಲಿರುವ ದೊಡ್ಡಿಗಳಿಗೆ ವೈದ್ಯಕೀಯ ತಂಡದೊಂದಿಗೆ ಬೇಟಿ ನೀಡಿ ಮಲೇರಿಯಾ ರೋಗ ನಿಯಂತ್ರಣ ಕಾರ್ಯ ಕಾರ್ಯಚಟುವಟಿಕೆ ಪರೀಶಿಲಿಸಿ ಮಾತನಾಡುತ್ತಾ, ಮನೆಯ ಸುತ್ತಲಿನ ಹೊಲದಲ್ಲಿ, ಕುರುಚಲು ಅಡವಿಯಲ್ಲಿ ಎಲ್ಲಾದರೂ ಶಾಶ್ವತ ನೀರು ನಿಲ್ಲುವ ಸ್ಥಳಗಳಿದ್ದರೆ, ಇಲಾಖೆಯ ಗಮನಕ್ಕೆ ತರಲು ಹಾಗೂ ಮನೆಯ ಸುತ್ತಲೂ ನೀರು ನಿಲ್ಲದಂತೆ ಜಾಗೃತಿ ವಹಿಸಿ. ಮುಖ್ಯವಾಗಿ ಕೃಷ್ಣಾ ನದಿಯ ಈ ಭಾಗದಲ್ಲಿ ಗುಡ್ಡಗಳ ಕಡಿದಾದ ಪ್ರದೇಶದಲ್ಲಿ ಅನಾಪೀಲಿಸ್ ಸೊಳ್ಳೆ ಉತ್ಪತ್ತಿ ತಡೆಯು ಸವಾಲಿನ ಕೆಲಸವಾಗಿದ್ದರೂ ಮಲೇರಿಯಾ ರೋಗ ತಡೆಗೆ ನಿರಂತರವಾಗಿ ಕಾರ್ಯ ನಿರ್ವಹಿಸಲಾಗುತ್ತಿದ್ದು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದರು.
ಮುಖ್ಯವಾಗಿ ಮಲೇರಿಯಾ ಜ್ವರವು ಪ್ಲಾಸ್ಮೋಡಿಯಂ ಎಂಬ ಪರಾವಲಂಭಿ ಸೂಕ್ಷ್ಮಾಣುವಿನಿಂದ ಉಂಟಾಗಬಹುದಾಗಿದ್ದು, ಹೆಣ್ಣು ಅನಾಫಿಲೀಸ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಮಲೇರಿಯಾ ರೋಗ ಲಕ್ಷಣಗಳು: ಚಳಿ, ನಡುಕ, ಬಿಟ್ಟು ಬಿಟ್ಟು ಜ್ವರ ಬರುವುದು, ವಾಕರಿಕೆ, ಮೈ ಬೆವರುವುದು ಲಕ್ಷಣಗಳಾಗಿವೆ.
ಈ ಲಕ್ಷಣಗಳು ಕಂಡು ಬಂದಲ್ಲಿ ಮಲೇರಿಯಾ ಜ್ವರ ಇರಬಹುದು ಎಂದು ಭಾವಿಸಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಲೆಪನ ಪರೀಕ್ಷೆಗೆ ಒಳಪಟ್ಟು ಖಚಿತಪಟ್ಟಲ್ಲಿ ಸೂಕ್ತ ಉಚಿತ ಚಿಕಿತ್ಸೆ ಪಡೆದು ಗುಣ ಹೊಂದಬಹುದಾಗಿದೆ ಎಂದು ಹೇಳಿದರು.
ನಿಯಂತ್ರಣಕ್ಕೆ ಸಹಕಾರ:
ಅಲ್ಲದೆ ಮಲೇರಿಯಾ ಪ್ರಕರಣಗಳ ತಡೆಗೆ ಮನೆಯ ಒಳಭಾಗ ಆರೋಗ್ಯ ಇಲಾಖೆಯಿಂದ ಕೈಗೊಳ್ಳುವ ಕೀಟನಾಶಕ ಸಿಂಪರಣೆಗೆ ಸಾರ್ವಜನಿಕರು ಸಹಕರಿಸಬೇಕು. ಸ್ವಯಂ ರಕ್ಷಣಾ ಕ್ರಮಗಳಾದ ಮಲಗುವಾಗ ಸೊಳ್ಳೆ ಪರದೆ ಬಳಕೆ ಮಾಡಬೇಕು. ಕಿಟಕಿಗಳಿಗೆ ಸೊಳ್ಳೆಗಳು ನುಸುಳದಂತೆ ಜಾಲರಿ ಅಳವಡಿಸುವುದು. ಆರೋಗ್ಯ ಇಲಾಖೆಯಿಂದ ನೀಡಲ್ಪಡುವ ಲಾರ್ವಹಾರಿ ಗಪ್ಪಿ ಮತ್ತು ಗಂಬೂಷಿಯಾ ಮೀನುಗಳನ್ನು ಶಾಶ್ವತವಾಗಿ ನೀರು ನಿಲ್ಲುವ ಸ್ಥಳಗಳಲ್ಲಿ ಬಿಡಲು ಉಚಿತವಾಗಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೀಟಶಾಸ್ತ್ರಜ್ಞೆ ಗಂಗೋತ್ರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅಡಿವೆಪ್ಪ, ಶರಣಬಸವ ಪಾಟೀಲ, ಬಸವರಾಜ, ತಾಲೂಕಾ ಎಪಡಮಲಾಜಿಷ್ಟ್ ಅಶೋಕ ಪಾಟೀಲ, ಆರೋಗ್ಯ ನಿರೀಕ್ಷಣಾಧಿಕಾರಿ ಅಮರೇಶ್, ಜಗದೀಶ್, ಅಲಿ, ಶಿವಕುಮಾರ್ ಸೇರಿದಂತೆ ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.


