ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಪರಿಣಾಮ ಕೊಲ್ಲಿ ರಾಷ್ಟ್ರಗಳ ಮೇಲೂ ಆಗಿರುವ ಕಾರಣ ಜಿಲ್ಲೆಯಲ್ಲಿ ಒಂದು ವಾರದಿಂದ ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಪೂರೈಕೆ ಸ್ಥಗಿತವಾಗಿದೆ. ಇದರಿಂದಾಗಿ ಜಿಲ್ಲೆಯ ಹೋಟೆಲ್‌ಗಳಲ್ಲಿ ಹಲವು ಆಹಾರ ಪದಾರ್ಥಗಳ ತಯಾರಿಕೆಗೆ ಕೊಕ್ಕೆ ಹಾಕಲಾಗಿದೆ.
ಜಿಲ್ಲೆಯ ಹೋಟೆಲ್‌ನವರು ಒಂದು ವಾರ ಅಥವಾ ಹತ್ತು ದಿನಕ್ಕೆ ಆಗುವಷ್ಟು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಮೊದಲೇ ಖರೀದಿಸುತ್ತಿದ್ದರು. ಅದರಲ್ಲಿಯೇ ಒಂದಷ್ಟು ಉಳಿದಿದ್ದು ಅವುಗಳನ್ನು ಮಿತವ್ಯಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗಂಜ್‌ ವೃತ್ತದಲ್ಲಿರುವ ಕೃಷ್ಣ ಭವನ ಹೋಟೆಲ್‌ ಸೇರಿದಂತೆ ಅನೇಕರು ಸಂಕಷ್ಟದ ಸಂದರ್ಭವನ್ನು ಸರಿದೂಗಿಸಲು ಕಟ್ಟಿಗೆ ಒಲೆಯ ಮೊರೆ ಹೋಗಿದ್ದಾರೆ.

ವಾಣಿಜ್ಯ ಬಳಕೆ ಸಿಲಿಂಡರ್‌ಗಳು ಯಥೇಚ್ಛವಾಗಿ ಸಿಗುತ್ತಿದ್ದಾಗ ಗ್ಯಾಸ್‌ ನಿರಂತರವಾಗಿ ಆನ್‌ ಮಾಡಿ ಇರಿಸಲಾಗುತ್ತಿತ್ತು. ಈಗ ಶೇ. 40ರಷ್ಟು ಮಾತ್ರ ಸಿಲಿಂಡರ್‌ ಬಳಕೆ ಮಾಡಲಾಗುತ್ತಿದೆ. ಎಲ್ಲ ಹೋಟೆಲ್‌ಗಳಲ್ಲಿ ನಿರಂತರವಾಗಿ ಲಭಿಸುತ್ತಿದ್ದ ದೋಸೆ, ಪೂರಿ, ಮಿರ್ಚಿ, ಭಜಿ, ಭೋಂಡಾ ಸೂಪ್‌ ಆಹಾರ ಪದಾರ್ಥಗಳ ತಯಾರಿಕೆಗೆ ಕೊಕ್ಕೆ ಹಾಕಲಾಗಿದೆ. ಗ್ರಾಹಕರು ಆರ್ಡರ್‌ ಕೊಟ್ಟಾಗ ಮಾತ್ರ ಇವುಗಳನ್ನು ತಯಾರಿಸಿಕೊಡಬೇಕಾದ ಕಾರಣ ಇವುಗಳ ತಯಾರಿಕೆ ಕೈ ಬಿಡಲಾಗಿದೆ. ಮೊದಲು ನಿರಂತರವಾಗಿ ಗ್ಯಾಸ್‌ ಬಳಕೆ ಮಾಡಲಾಗುತ್ತಿತ್ತು. ಈಗ ನಿಯಮಿತವಾಗಿ ಬಳಕೆ ಮಾಡಲಾಗುತ್ತಿದೆ. ಇಡ್ಲಿ ತಯಾರಿಕೆಗೆ ಕಟ್ಟಿಗೆ ಬಾಯ್ಲರ್‌ ಉಪಯೋಗಿಸಲಾಗುತ್ತಿದೆ.

‘ಇಂಥದ್ದೊಂದು ಸಂಕಷ್ಟದ ಪರಿಸ್ಥಿತಿ ಬರುತ್ತದೆ ಎನ್ನುವುದು ಗೊತ್ತಿರಲಿಲ್ಲ. ಮೊದಲು ದಿನವೊಂದಕ್ಕೆ ಒಂದೂವರೆಯಷ್ಟು ಸಿಲಿಂಡರ್‌ ಖಾಲಿಯಾಗುತ್ತಿತ್ತು. ಈಗ ಎರಡು ದಿನಗಳಿಗೆ ಒಂದು ಸಿಲಿಂಡರ್‌ ಮಾತ್ರ ಖರ್ಚು ಮಾಡುತ್ತಿದ್ದೇವೆ. ಇನ್ನು ಹತ್ತು ದಿನ ವಾಣಿಜ್ಯ ಬಳಕೆ ಸಿಲಿಂಡರ್‌ ಸಿಗುವುದು ಕಷ್ಟ. ಕಟ್ಟಿಗೆ ಕೂಡ ಒಂದು ಟನ್‌ಗೆ ₹4 ಸಾವಿರದಿಂದ ₹4.5 ಸಾವಿರ ಆಗಿದೆ’ ಎಂದು ಕೃಷ್ಣಭವನ ಹೋಟೆಲ್‌ ಮಾಲೀಕರೂ ಆದ ಹೋಟೆಲ್‌ಗಳ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಶಶಿಕರ ಶೆಟ್ಟಿ ತಿಳಿಸಿದರು.

ಸಂಕಷ್ಟದ ಪರಿಸ್ಥಿತಿಯನ್ನು ಮೊದಲೇ ಅರಿತಿದ್ದ ಕೆಲವು ಹೋಟೆಲ್‌ಗಳ ಮಾಲೀಕರು ಇನ್ನು ಹತ್ತು ದಿನಗಳಿಗೆ ಆಗುವಷ್ಟು ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದು, ಅಷ್ಟರೊಳಗೆ ಸಮಸ್ಯೆ ಪರಿಹಾರವಾಗಬಹುದು ಎನ್ನುವ ಭರವಸೆ ಹೊಂದಿದ್ದಾರೆ.

ಡಾ. ಸುರೇಶ ಇಟ್ನಾಳ ಜಿಲ್ಲಾಧಿಕಾರಿಹೋಟೆಲ್‌ಗಳಲ್ಲಿ ಗ್ಯಾಸ್ ಹೊರತಾಗಿ ಸೋಲಾರ್ ಬಯೋಗ್ಯಾಸ್ ಬಳಕೆಗೆ ಅವಕಾಶವಿದ್ದು ಈ ಬಗ್ಗೆ ಹೋಟೆಲ್‌ಗಳ ಮಾಲೀಕರಿಗೆ ಅರಿವು ಮೂಡಿಸಬೇಕು. ಖಾಸಗಿ ಕಂಪನಿಗಳು ಗ್ಯಾಸ್ ಬಳಕೆ ತಾತ್ಕಾಲಿಕವಾಗಿ ನಿಲ್ಲಿಸಬೇಕು.
‘ಗೃಹಬಳಕೆ ಕೊರತೆಯಿಲ್ಲ; ಆತಂಕಬೇಡ’

ಕೊಪ್ಪಳ: ಜಿಲ್ಲೆಯಲ್ಲಿ ಮನೆಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ನಡೆದ ಸಭೆಯಲ್ಲಿ ಮಾತನಾಡಿದ ಅವರು ‘ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಆತಂಕದಿಂದ ಅತಿಯಾಗಿ ಗ್ಯಾಸ್ ಬುಕ್ಕಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ವ್ಯವಸ್ಥೆಯ ಮೇಲೆ ಒತ್

ತಡ ಉಂಟಾಗುತ್ತದೆ’ ಎಂದರು. ‘ಗೃಹೋಪಯೋಗಿ ಅನಿಲ ಸಿಲಿಂಡರ್ ವಿತರಣೆ ವೇಳೆ ಬಿಲ್ ಮೊತ್ತಕ್ಕಿಂತ ಹೆಚ್ಚು ಹಣ ತೆಗೆದುಕೊಳ್ಳುವಂತಿಲ್ಲ. ಹಾಗೇನಾದರೂ ತೆಗೆದುಕೊಂಡಲ್ಲಿ ಅಂತಹ ಗ್ಯಾಸ್ ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲಿಸಿ ಪರವಾನಗಿಯನ್ನೂ ರದ್ದು ಪಡಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *