“ಮಹಿಳೆ ಕೇವಲ ಒಂದು ಕುಟುಂಬದ ಶಕ್ತಿಯಲ್ಲ, ಅವಳು ಇಡೀ ರಾಷ್ಟ್ರದ ಚೈತನ್ಯ. ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಗೌರವ ನೀಡಿದಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ” ಎಂದು ಮಮತಾ ರಾಯರೆಡ್ಡಿ ಹೇಳಿದರು.ಪಟ್ಟಣದ ಹೊರವಲಯದ ಬಿ.ವಿ. ಶೆಟ್ಟರ್ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಲಾದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಹಾಗೂ ಯಲಬುರ್ಗಾ ವಿಧಾನಸಭಾ ಮಹಿಳಾ ಕಾಂಗ್ರೆಸ್ ಮತ್ತು ಆರಾಮ್ ಎನ್‌ಜಿಓ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಕೇವಲ ಒಂದು ದಿನದ ಗೌರವ ನೀಡುವುದಲ್ಲದೇ ಪ್ರತಿದಿನವೂ ಅವರ ತ್ಯಾಗ ಮತ್ತು ಕೊಡುಗೆಗಳನ್ನು ಸ್ಮರಿಸಬೇಕು. ಮಹಿಳೆ ತಾಳ್ಮೆಯ ಸಂಕೇತವಾಗಿದ್ದು, ಜೀವನದಲ್ಲಿ ಎದುರಾಗುವ ಸವಾಲುಗಳ ನಡುವೆಯೂ ನಗುಮುಖದಿಂದ ಜವಾಬ್ದಾರಿಗಳನ್ನು ನಿಭಾಯಿಸುವ ಶಕ್ತಿಯೇ ಅವಳ ದೊಡ್ಡ ಬಲವಾಗಿದೆ. ತಾಳ್ಮೆ ಸೋಲು ಅಲ್ಲ, ಅದು ಪರಿಸ್ಥಿತಿಯನ್ನು ಗೆಲ್ಲುವ ದಾರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ 2026ನೇ ಸಾಲಿನ ಕೊಪ್ಪಳ ಜಿಲ್ಲಾ ಸ್ತ್ರೀ ರತ್ನ ಪ್ರಶಸ್ತಿ ಅಡಿಯಲ್ಲಿ ವಿದ್ಯೆ, ಕೃಷಿ, ಸಮಾಜಸೇವೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 14 ಮಹಿಳೆಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಶರಣಮ್ಮ ಚಟ್ಟಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿರುವುದು ಸಂತಸದ ವಿಷಯ. ಆದರೆ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಇನ್ನೂ ಶಿಕ್ಷಣ ಮತ್ತು ಆರೋಗ್ಯ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಇದೇ ವೇಳೆ ‘ಮಹಿಳಾ ಸಬಲೀಕರಣ ಮತ್ತು ಇಂದಿನ ಸವಾಲುಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಹಿಳೆಯರ ಕಾನೂನು ಹಕ್ಕುಗಳು ಹಾಗೂ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭರತನಾಟ್ಯ, ಸರಸ್ವತಿ ಸಾಂಸ್ಕೃತಿಕ ಮಹಿಳಾ ಸಂಘ ಕುಷ್ಟಗಿ, ಮಹಿಳಾ ಡೊಳ್ಳು ಕುಣಿತ, ಮಲ್ಲಗಂಬ, ಸಮರಕಲೆ ಕಿನ್ನಾಳ ಕಲೆಯ ವಸ್ತು ಪ್ರದರ್ಶನ, ಜಾನಪದ ಗೀತೆ ಮತ್ತು ನೃತ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ಮನಸೂರೆಗೊಳಿಸಿದವು. ವಿಶೇಷವಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶತಾಯುಷಿ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ರಾಮಾಯಣದ ಸನ್ನಿವೇಶ ಮತ್ತು ಅಪರೂಪದ ಜನಪದ ಕಲೆ ತೊಗಲುಗೊಂಬೆಯಾಟ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಶರಣಮ್ಮ ಚನ್ನಪ್ಪ ಚಟ್ಟಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ಶ್ರೀಮತಿ ಗಿರಿಜಾ ಸಂಗಟಿ, ಫರೀದಾ ಬೇಗಂ ತಂಬಾಕದಾರ, ಸಾವಿತ್ರಿ ಎಸ್. ಗೊಲ್ಲರ್, ಜಯಶ್ರೀ ಕಂದುಕುರ್, ನಂದಿತಾ ದಾನರೆಡ್ಡಿ, ಶರಣಮ್ಮ ಪೂಜಾರಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಪ್ರವೀಣ್ ಮುಧೋಳ್, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ ಮತ್ತು ಜಿಲ್ಲೆಯ ಅನೇಕ ಮಹಿಳೆಯರು ಉಪಸ್ಥಿತರಿದ್ದರು.

