ಸೂರ್ಯಕಾಂತಿ ಬೆಳೆ ಅಲ್ಪಾವಧಿಯಲ್ಲಿಯೇ ಅಧಿಕ ಲಾಭ ಕೊಡುತ್ತದೆ’ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾಧಿಕಾರಿ ಡಾ.ಎ.ಆರ್.ಕುರುಬರ ಹೇಳಿದರು.ತಾಲ್ಲೂಕಿನ ಗಬ್ಬೂರಿನಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆಯಿಂದ ರೈತ ಶಿವಾಜಿ ಕಲ್ಲೂರು ಅವರ ಹೊಲದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರ ಕಳೆದ ಹಲವು ವರ್ಷಗಳಿಂದ ಎಣ್ಣೆ ಕಾಳುಗಳ ಬೆಳೆ ಬೆಳೆಯಲು ಮತ್ತು ರೈತರ ಆದಾಯ ಹೆಚ್ಚಿಸಲು ಒಳಾಂಗಣ ತರಬೇತಿ, ಹೊರಾಂಗಣ ತರಬೇತಿ ಮತ್ತು ಗುಚ್ಛ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಂಡಿದ್ದು, ಸೂರ್ಯಕಾಂತಿ ಬೆಳೆಯಲ್ಲಿ ಸಂಸ್ಕರಣಾ ತಳಿಗಳ ಆಯ್ಕೆ, ಸಮಗ್ರ ಬೇಸಾಯ ಕ್ರಮಗಳು, ಕೀಟ ಹಾಗೂ ರೋಗಗಳ ನಿರ್ವಹಣೆಯ ಬಗ್ಗೆ ವಿಜ್ಞಾನಿಗಳಿಂದ ನಿರಂತರ ಮಾಹಿತಿ ನೀಡುತ್ತಿದ್ದು, ರೈತಾಪಿ ವರ್ಗಕ್ಕೆ ಅನುಕೂಲವಾಗಿದೆ’ ಎಂದು ಹೇಳಿದರು.

ಬೀಜ ಘಟಕದ ವಿಶೇಷಾಧಿಕಾರಿ ಅರುಣ ಕುಮಾರ ಹೊಸಮನಿ ಮಾತನಾಡಿ,’ರೈತರು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಬೆಳೆ ಬೆಳೆಯಬೇಕು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಬಿಡುಗಡೆಯಾದ ಸೂರ್ಯಕಾಂತಿಯ ವಿವಿಧ ಸಂಸ್ಕರಣಾ ತಳಿಗಳ ಬಗ್ಗೆ ಮಾಹಿತಿ ನೀಡಿ ರೈತರು ಪ್ರಮಾಣಿಕೃತ ಬೀಜಗಳನ್ನೇ ಉಪಯೋಗಿಸಬೇಕು’ ಎಂದು ಸಲಹೆ ನೀಡಿದರು.

ಅಖಿಲ ಭಾರತ ಸಮನ್ವಿತ ಸೂರ್ಯಕಾಂತಿ ಸಂಶೋಧನಾ ಯೋಜನೆ ಮುಖ್ಯಸ್ಥ ವಿಕಾಸ್.ವಿ ಕುಲಕರ್ಣಿ ಮಾತನಾಡಿ,’ಸೂರ್ಯಕಾಂತಿ ಬಹು ಮುಖ್ಯ ಎಣ್ಣೆಕಾಳಿನ ಬೆಳೆಯಾಗಿದ್ದು, ಇದನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲೂ ಕೂಡ ಬೆಳೆಯಬಹುದಾಗಿದೆ. ಆರ್.ಎಸ್.ಎಫ್.ಎಚ್ 700 ಸಂಸ್ಕರಣಾ ತಳಿಯನ್ನು ಎಕರೆಗೆ 2 ಕಿ.ಗ್ರಾಂ ಬೀಜವನ್ನು ಸಾಲಿನಿಂದ ಸಾಲಿಗೆ 60 ಸೆ.ಮೀ ಮತ್ತು ಗಿಡದಿಂದ ಗಿಡಕ್ಕೆ 30 ಸೆ.ಮೀ ಅಂತರದಲ್ಲಿ ಬಿತ್ತಬೇಕು’ ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ತಿಮ್ಮಣ್ಣ ನಾಯಕ ಮಾತನಾಡಿ,’ ಆರ್.ಎಸ್.ಎಫ್.ಎಚ್ 700 ಸಂಸ್ಕರಣಾ ತಳಿಯು ಬೂದು ರೋಗಕ್ಕೆ ನಿರೋಧಕತೆ ಹೊಂದಿದ್ದು, ಎಕರೆಗೆ 7-8 ಕ್ವಿಂಟಲ್ ಇಳುವರಿ ಪಡೆಯಬಹುದಾಗಿದೆ’ ಎಂದರು.

ಶೀವಾಣಿ, ಜಿ.ಎನ್, ಮಲ್ಲರೆಡ್ಡಿ, ಸಹಾಯಕ ನಿರ್ದೇಶಕ ಶ್ರೀನಿವಾಸ ನಾಯಕ, ಕೃಷಿ ಅಧಿಕಾರಿಗಳಾದ ರೇಖಾ, ಅಮರೇಶ ಆಸಿಹಾಳ ಭಾಗವಹಿಸಿದ್ದರು.

Leave a Reply

Your email address will not be published. Required fields are marked *