ತಾಳಿಕೋಟಿ: ಜಗದ್ಗುರುಗಳಾದ ಶ್ರೀ ರಂಭಾಪುರಿ ಪೂಜ್ಯರ ಪೀಠದ ಶಾಖಾ ಮಠವು ವಿಜಯಪುರದಲ್ಲಿ ಸ್ಥಾಪನೆಯಾಗುತ್ತಿರುವುದು ಸಂತೋಷದ ವಿಷಯ,ಮಾರ್ಚ 14 ರಂದು ನಡೆಯಲಿರುವ ಭೂಮಿ ಪೂಜೆ ಕಾರ್ಯಕ್ರಮದ ಯಶಸ್ವಿಗೆ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದು ವಿ.ವಿ.ಸಂಘದ ಅಧ್ಯಕ್ಷ, ಸಮಾಜದ ಹಿರಿಯರಾದ ವಿರೂಪಾಕ್ಷಯ್ಯ ಹಿರೇಮಠ ಹೇಳಿದರು. ಗುರುವಾರ ಪಟ್ಟಣದ ಶ್ರೀ ಪಂಚಾಚಾರ್ಯ ಸಹಕಾರಿ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದ ಗಣ್ಯರಾದ ಸೋಮಶೇಖರ ಗಣಾಚಾರಿ ಹಾಗೂ ಪ್ರಾಚಾರ್ಯ ಐ.ಬಿ.ಹಿರೇಮಠ ಅವರು ಮಾತನಾಡಿ ದೇಶದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಪೀಠದ ಸುಮಾರು 12 ಸಾವಿರ ಶಾಖಾ ಮಠಗಳಿವೆ ಆದರೆ ವಿಜಯಪುರ ಜಿಲ್ಲೆಯಲ್ಲಿ ಇಲ್ಲಿವರೆಗೆ ಒಂದೂ ಶಾಖಾ ಮಠ ಇರಲಿಲ್ಲ ಬಹುದಿನಗಳಿಂದ ಇದರ ಬೇಡಿಕೆ ಇತ್ತು ಮಾನ್ಯ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರು ಆಸಕ್ತಿವಹಿಸಿ ಸ್ಥಳದ ಅವಕಾಶ ಮಾಡಿಕೊಟ್ಟು ಇದರ ಭೂಮಿ ಪೂಜೆಯನ್ನು ಮಾರ್ಚ್ 14 ರಂದು ಶನಿವಾರ ಸಂಜೆ 4:00 ಘಂಟೆಗೆ ವಿಜಯಪುರದ ಸುರಭಿ ಸಿದ್ದೇಶ್ವರ ಲೇಔಟ್ ನವರಸಪುರದಲ್ಲಿ ಹಮ್ಮಿಕೊಂಡಿದ್ದಾರೆ ಸದರಿ ಕಾರ್ಯಕ್ರಮಕ್ಕೆ ಸಮಾಜದ ಬಾಂಧವರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಕೇಳಿಕೊಂಡರು. ಪ್ರಸ್ತಾವಿಕವಾಗಿ ಶ್ರೀ ಪಂಚಾಚಾರ್ಯ ಸಹಕಾರಿ ಸಂಘದ ಅಧ್ಯಕ್ಷ ಮುತ್ತುರಾಜ್ ಜಹಗೀರದಾರ ಮಾತನಾಡಿ ನಮ್ಮ ಜಿಲ್ಲೆಯಲ್ಲಿಯೇ ಶ್ರೀ ರಂಭಾಪುರಿ ಜಗದ್ಗುರುಗಳ ಪೀಠದ ಶಾಖಾಮಠ ಸ್ಥಾಪನೆಯಾಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಸದರಿ ಕಾರ್ಯಕ್ರಮದಲ್ಲಿ ಸಮಾಜದ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದರು. ಪೂರ್ವಭಾವಿ ಸಭೆಯಲ್ಲಿ ಸಮಾಜದ ಪ್ರಮುಖರಾದ ದಾನಯ್ಯ ಹಿರೇಮಠ,ಈರಯ್ಯ ಹಿರೇಮಠ, ನಾಗಭೂಷಣ ಡೋಣೂರಮಠ, ಶ್ರೀಶೈಲ ಹಿರೇಮಠ, ವೀರೇಶ ಡೋಣೂರಮಠ, ಗಜದಂಡಯ್ಯ ಹಿರೇಮಠ, ಚಂದ್ರಶೇಖರ ಹಿರೇಮಠ, ಬಸವರಾಜ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *