ರಾಯಚೂರು : ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ನಲ್ಲಮಲ ಅರಣ್ಯದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ವಿಜಯಪುರ, ಬಾಗಲಕೋಟೆ, ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಗಳ ಭಕ್ತರ ದಂಡು ಹಗಲು ರಾತ್ರಿ ಎನ್ನದೇ ಪಾದಯಾತ್ರೆಯಲ್ಲಿ ಸಾಗುತ್ತಿದೆ.ಬೆಳಗಿನ ಜಾವ ಹಾಗೂ ಮುಸ್ಸಂಜೆ ವೇಳೆಯಲ್ಲಿ ಅಧಿಕ ಪ್ರಮಾಣದಲ್ಲಿ ಭಕ್ತರ ದಂಡು ಕಂಡು ಬರುತ್ತಿದೆ.

ಪಾದಯಾತ್ರೆಯಲ್ಲಿ ಮಹಿಳೆಯರು, ಬಾಲಕ, ಬಾಲಕಿಯರೂ ಸಹ ಮಲ್ಲಯ್ಯನ ಸ್ಮರಣೆ ಭಜನೆ ಮಾಡುತ್ತ ಹೊರಟಿದ್ದಾರೆ.

 

ಡಾಂಬರ್ ರಸ್ತೆ ಮೇಲೆ ಕಾಲುಗಳು ಸುಡುವುದನ್ನು ರಕ್ಷಿಸಿಕೊಳ್ಳಲು ಕೆಲವು ಯುವಕರು ಹಗುರವಾದ ಮರದ ತುಂಡುಗಳಿಗೆ, ಕೆಲವರು ಬೊಂಬುವಿಗೆ ಕಾಲುಗಳನ್ನು ಕಟ್ಟಿ, ಸಮತೋಲನ ಕಾಯ್ದುಕೊಂಡು ನಡೆಯುತ್ತಿದ್ದಾರೆ. ಕೆಲವರು ತಲೆಯ ಮೇಲೆ ನೀರಿನ ಬಟ್ಟೆ ತೊಯ್ಯಿಸಿಕೊಂಡು ತಲೆಯ ಮೇಲೆ ಹಾಕಿಕೊಂಡು ಮುನ್ನಡೆದಿದ್ದಾರೆ.

 

ಶ್ರೀಶೈಲದಲ್ಲಿ ಹೋಳಿ ಹುಣ್ಣಿಮೆಯಿಂದ ಆರಂಭವಾಗಿ ಯುಗಾದಿಯವರೆಗೆ ನಡೆಯುವ ಜಾತ್ರೆಯಲ್ಲಿ ಪಾಲ್ಗೊಳ್ಖಲು ಹೊರಟಿದ್ದಾರೆ. ಬೃಹತ್ ಜಾತ್ರೆಯು ಶಿವ ಮತ್ತು ಪಾರ್ವತಿಯ (ಭ್ರಮರಾಂಬ) ಭವ್ಯ ಆರಾಧನಾ ಮಹೋತ್ಸವವಾಗಿದೆ. ಶಿವನ 12 ಜ್ಯೋತಿರ್ಲಿಂಗ ಮತ್ತು 18 ಮಹಾಶಕ್ತಿ ಪೀಠಗಳಲ್ಲಿ ಒಂದಾಗಿರುವ ನಂಬಿಕೆ ಇರುವ ಕಾರಣ ಭಕ್ತರ ಸಂಖ್ಯೆ ಅಧಿಕ ಇದೆ.

 

ಜಮಖಂಡಿ ತಾಲ್ಲೂಕಿನ ಕಾಖಂಡಕಿ ಗ್ರಾಮದ ಭಕ್ತರು ಲಿಂಗಸುಗೂರು ತಾಲ್ಲೂಕಿನ ಈಚನಾಳದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದಾಸೋಹ ಸ್ವೀಕರಿಸಿ ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಿ ಬೆಳಗಿನ ಜಾವ ಪಾದಯಾತ್ರೆ ಮುಂದುವರಿಸಿದ್ದಾರೆ.

 

ಅಲ್ಲಲ್ಲಿ ದಾನಿಗಳಿಂದ ಸೇವೆ: ಶ್ರೀಶೈಲ ಭಕ್ತರಿಗೆ ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ಟೆಂಟ್‌ಗಳನ್ನು ಹಾಕಿ ನೆರಳಿನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೆಲವು ದಾನಿಗಳು ಪಾದಯಾತ್ರಿಗಳಿಗೆ ಬಾಳೆಹಣ್ಣು, ಕಲ್ಲಂಗಡಿ, ಕರಬೂಜ, ಪಪ್ಪಾಯಿ ಹಣ್ಣು, ಸರಬತ್‌, ಮಜ್ಜಿಗೆ ವ್ಯವಸ್ಥೆ ಮಾಡಿದ್ದಾರೆ.

 

ಪಾದಯಾತ್ರಿಗಳು ಉಪಾಹಾರ ಸೇವಿಸಿ, ಊಟ ಮಾಡಿಕೊಂಡು ಆಯಾಸವಾದಾಗ ಟೆಂಟ್‌ಗಳಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು ಮುಂದೆ ಪ್ರಯಾಣ ಬೆಳೆಸುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಸಿಲು ಇರುವ ಕಾರಣ ಬಹುತೇಕ ಭಕ್ತರು ಬಿಸಿಲಲ್ಲಿ ಹೊರಡಲು ಹಿಂಜರಿಯುತ್ತಿದ್ದಾರೆ. ಕೆಲವರು ರಾತ್ರಿಯಿಡೀ ನಡೆದುಕೊಂಡೇ ಹೋಗುತ್ತಿದ್ದಾರೆ.

 

ನಿತ್ಯ ಕನಿಷ್ಠ 20ರಿಂದ 30 ಕಿ.ಮೀ ನಡೆಯುತ್ತಿದ್ದಾರೆ. ಕಸುವು ಇದ್ದವರು 40 ಕಿ.ಮೀ ವರೆಗೂ ನಡೆಯುತ್ತಿದ್ದಾರೆ ಎಂದು ಪಾದಯಾತ್ರಿಗಳು ಹೇಳುತ್ತಾರೆ.

 

ಉಚಿತ ಆರೋಗ್ಯ ತಪಾಸಣೆ: ನಗರದಲ್ಲಿ ಸೋಮವಾರ ವೀರಶೈವ ರುದ್ರ ಸೇನೆ ನೇತೃತ್ವದಲ್ಲಿ ವೈದ್ಯಕೀಯ ಸಿಬ್ಬಂದಿ ವಿವಿಧ ಜಿಲ್ಲೆಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರ ಆರೋಗ್ಯ ತಪಾಸಣೆ ಮಾಡಿದರು. ಸುದೀರ್ಘವಾಗಿ ನಡೆದ ಕಾರಣ ಕಾಲು ಊತುಕೊಂಡವರಿಗೆ ಮುಲಾಮ್ ಹಚ್ಚಿ ಉಪಚರಿಸಿದರು. ಕೆಲವರಿಗೆ ಮಾತ್ರೆಗಳನ್ನು ಕೊಟ್ಟರು.

 

ಅಸ್ಕಿಹಾಳ ಮಡಿವಾಳ ಮಾಚಿದೇವ ಸಂಘದ ವತಿಯಿಂದ ಶ್ರೀಶೈಲ ಪಾದ ಯಾತ್ರೆಗಳಿಗೆ ಹಣ್ಣು ಹಂಪಲು, ಮಜ್ಜಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಹಂಪಣ್ಣ, ಗೌರವಾಧ್ಯಕ್ಷ ವೆಂಕಟೇಶ ಎಂ. ಮಲ್ಲಿಕಾರ್ಜುನ ಜೆ ಇ., ತಾಯಪ್ಪ, ಮಲ್ಲಿಕಾರ್ಜುನ ಜಿ,, ಖಜಾಂಚಿ ಹುಸೇನಪ್ಪ, ರಾಜಶೇಖರ ಅವರು ಸಹ ಭಕ್ತರಿಗೆ ನೆರವಾಗುತ್ತಿದ್ದಾರೆ.

 

ವೀರಶೈವ ಲಿಂಗಾಯತ ಸಮಾಜ, ವೀರಶೈವ ಮಹಾಸಭಾ ಮತ್ತು ಬಸವ ಕೇಂದ್ರದ ಸಹಯೋಗದಲ್ಲಿ ವೀರಶೈವ ರುದ್ರ ಸೇನೆಯು ಶ್ರೀಶೈಲ ಯಾತ್ರಾರ್ಥಿಗಳಿಗೆ 12 ವರ್ಷಗಳಿಂದ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಆಯೋಜಿಸಿಕೊಂಡು ಬಂದಿದೆ ಎಂದು ವೀರಶೈವ ರುದ್ರಸೇನಾ ಅಧ್ಯಕ್ಷ ಶಿವಶರಣ ರೆಡ್ಡಿ ಹೇಳುತ್ತಾರೆ.

 

‘‍ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯಲ್ಲಿ ಶ್ರೀಶೈಲಕ್ಕೆ ತೆರಳುತ್ತಿದ್ದಾರೆ. ಇಂದಿನಿಂದ ಆರು ದಿನಗಳವರೆಗೆ ಭಕ್ತರಿಗೆ ಉಪಾಹಾರ ಸೇವೆ ಮುಂದುವರಿಯಲಿದೆ’ ಎನ್ನುತ್ತಾರೆ.

 

‘ನಿತ್ತ ಒಂದು ಸಾವಿರದಿಂದ ಮೂರು ಸಾವಿರ ಪಾದಯಾತ್ರಿಗಳಿಗೆ ಉಚಿತ ಹಣ್ಣು ಹಂಪಲು ವಿತರಣೆ ಮಾಡುತ್ತಿದ್ದೇವೆ’ ಎಂದು ಮಲ್ಲಿಕಾರ್ಜುನ ಹೇಳುತ್ತಾರೆ.

Leave a Reply

Your email address will not be published. Required fields are marked *