ರಾಯಚೂರು ಮಾರ್ಚ್ 12 (ಕ.ವಾ.): ಬೆಂಗಳೂರಿನ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯು 371ಜೆ ಅಡಿಯಲ್ಲಿ ರಾಜ್ಯಮಟ್ಟದ ಸಂಸ್ಥೆಯ ವ್ಯಾಪ್ತಿಗೆ ಒಳಪಡುತ್ತದೆ. ಈ ಸಂಸ್ಥೆಯಲ್ಲಿ 371ಜೆ ಮೀಸಲಾತಿ ಅಳವಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 921ಕ್ಕೆ ಕರ್ನಾಟಕ ವಿಧಾನಸಭೆಯಲ್ಲಿ ಮಾರ್ಚ 12ರಂದು ಲಿಖಿತ ಉತ್ತರ ನೀಡಿರುವ ಸಚಿವರು, ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯಲ್ಲಿ ಬೋಧಕೇತರ ಸಿಬ್ಬಂದಿಗಳ ನೇಮಕಾತಿಯ 371ಜೆ ಮೀಸಲಾತಿಗೆ ಸಂಬಂಧಿಸಿದಂತೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯು ಸಮಿತಿಯನ್ನು ರಚಿಸಿಕೊಂಡಿದ್ದು, ಈ ಸಮಿತಿಯು ಮಾಡುವ ಶಿಫಾರಸ್ಸುಗಳನ್ನೊಳಗೊಂಡ ಪ್ರಸ್ತಾವನೆಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂಸ್ಥೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಶೇ.45:50 ಅನುಪಾತದಲ್ಲಿ ವೇತನುದಾನ ಮಂಜೂರು ಮಾಡಲಾಗುತ್ತಿದೆ. ಬಾಕಿ ಶೇ.5ರಷ್ಟು ಅನುದಾನವನ್ನು ಸಂಸ್ಥೆಯು ತನ್ನ ಸ್ವಂತ ಸಂಪನ್ಮೂಲದಿಂದ ಭರಿಸುತ್ತಿದೆ. ಈ ಸಂಸ್ಥೆಗೆ ಪ್ರಾಧ್ಯಾಪಕರ ಹುದ್ದೆಗಳು, ಸಹ ಪ್ರಾಧ್ಯಾಪಕರ ಹುದ್ದೆಗಳು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಮಂಜೂರಾಗಿವೆ. ಈ ಸಂಸ್ಥೆಯಲ್ಲಿ ನೇಮಕಾತಿಗಳನ್ನು ಸರ್ಕಾರದ ನಿಯಮಗಳಂತೆ ನಡೆಸಲಾಗುತ್ತದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *