ರಾಯಚೂರು ಮಾರ್ಚ್ 12 (ಕರ್ನಾಟಕ ವಾರ್ತೆ): ಎಸ್.ಎಸ್.ಎಲ್.ಸಿ ಸೇರಿದಂತೆ ಬೇರೆ ಬೇರೆ ಪರೀಕ್ಷೆಗಳಿಗೆ ಸಿದ್ದತೆ ಮಾಡಿಕೊಳ್ಳುವ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗ ಗ್ರಂಥಾಲಯಗಳಲ್ಲಿ ಸಂಜೆ ವೇಳೆ ಪ್ರತಿ ದಿನ ಚಹಾ ಮತ್ತು ಬಿಸ್ಕೆಟ್ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ ಅವರು ಸುತ್ತೋಲೆ ಹೊರಡಿಸಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ಗ್ರಂಥಪಾಲಕರಿಗೆ ನಿರ್ದೇಶನ ನೀಡಿದ್ದಾರೆ.
ಇದೇ ತಿಂಗಳು 18 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಉತ್ತಮ ಓದುವ ವಾತಾವರಣದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಗ್ರಂಥಾಲಯಗಳು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಕಾರ್ಯನಿರ್ವಹಿಸಬೇಕು.
ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಸಮಯ ಬದಲಾವಣೆ ಹಾಗೂ ಅಭ್ಯಾಸ ಮಾಡಲು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಗ್ರಾಮ ಪಂಚಾಯತಿ ಗ್ರಂಥಾಲಯಗಳ ಕಾರ್ಯ ಸಮಯವನ್ನು ಪ್ರಸ್ತುತ ಇರುವ ಬೆಳಿಗ್ಗೆ 9.00 ರಿಂದ ಸಂಜೆ 6.30 ರವರೆಗೆ ಇರುವ ಸಮಯದ ಹೊರತಾಗಿ, ವಿದ್ಯಾರ್ಥಿಗಳ ಓದುವ ಅವಧಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಶಾಂತವಾದ ಮತ್ತು ಅನುಕೂಲಕರ ವಾತಾವರಣದಲ್ಲಿ ಓದಲು ಅವಕಾಶ ಕಲ್ಪಿಸುವುದು. ಗ್ರಾಮ ಪಂಚಾಯತಿಗಳು ವಿಶೇಷ ಕಾಳಜಿ ವಹಿಸಿ ಗ್ರಂಥಾಲಯಗಳಲ್ಲಿ ಸ್ವಚ್ಛತೆ, ಸಮರ್ಪಕ ಬೆಳಕು ಹಾಗೂ ಕುಳಿತುಕೊಳ್ಳುವ ವ್ಯವಸ್ಥೆಗಳನ್ನು ಕಲ್ಪಿಸಿ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು.
ಗ್ರಂಥಾಲಯದಲ್ಲಿ ಸಂಜೆಯಿಂದ ರಾತ್ರಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಗ್ರಾಮ ಪಂಚಾಯತಿ ಸ್ವಂತ ಸಂಪನ್ಮೂಲಗಳಿಂದ ಸಂಜೆ ಟೀ ಮತ್ತು ಬಿಸ್ಕೆಟ್ ವ್ಯವಸ್ಥೆ ಮಾಡಬೇಕು.
ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಮೇಲ್ಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸುತ್ತೋಲೆಯಲ್ಲಿ ಜಿ.ಪಂ ಸಿಇಓ ಅವರು ಸೂಚಿಸಿದ್ದಾರೆ.

