ರಾಯಚೂರು ಮಾರ್ಚ್ 12 (ಕರ್ನಾಟಕ ವಾರ್ತೆ): ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಕಾರ್ಯಕ್ರಮಗಳಿಗೆ ಹಂಚಿಕೆಯಾದ ಅನುದಾನವು ಕಾಲಮಿತಿಯೊಳಗೆ ಬಳಕೆಯಾಗಬೇಕು. ಅಧಿಕಾರಿಗಳು ಬೇಜವಾಬ್ದಾರಿ ವಹಿಸಿದ ಕಾರಣಕ್ಕೆ ಅನುದಾನವು ಬಳಕೆಯಾಗದೇ ಲ್ಯಾಪ್ಸ್ ಆದಲ್ಲಿ ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಮುಲಾಜಿಲ್ಲದೇ ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಎಚ್ಚರಿಕೆ ನೀಡಿದರು.

ಮಾರ್ಚ್ 12ರಂದು ಗುರುವಾರ ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆಯ 2025-26ನೇ ಸಾಲಿನ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದವರ ಏಳ್ಗೆಗಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಅನುದಾನವು ಆಯಾ ಸಮುದಾಯದವರಿಗೆ ನ್ಯಾಯಯುತವಾಗಿ ತಲುಪಬೇಕು. ನಿಗದಿಪಡಿಸಿದ ಗುರಿಯನುಸಾರ ಬಿಡುಗಡೆಯಾದ ಅನುದಾನವು ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ತಲುಪಬೇಕು. 2025-26 ಸಾಲಿನಲ್ಲಿ ಬಿಡುಗಡೆಯಾದ ಅನುದಾನವು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು. ಕಾರ್ಯಕ್ರಮ ನೀಡಿ ಅನುದಾನ ಬಿಡುಗಡೆ ಮಾಡಿದಾಗ್ಯೂ ಅನುದಾನ ಬಳಸದೇ ಇರುವುದು ತಪ್ಪಾಗುತ್ತದೆ. ಇಲಾಖಾವಾರು ಪರಿಶೀಲನೆ ವೇಳೆ ಯಾವುದೇ ಇಲಾಖೆಯ ಅಧಿಕಾರಿಗಳು ಅನುದಾನ ಬಳಸದೇ ತಪ್ಪು ಎಸಗಿರುವುದು ಕಂಡು ಬಂದಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಅಧಿನಿಯಮದಡಿ ಅಮಾನತು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ಜೊತೆಗೆ ಎಸ್ಸಿಪಿ ಮತ್ತು ಟಿಎಸ್ಪಿ ಕಾರ್ಯಕ್ರಮಗಳ ಭೌತಿಕ ಹಾಗೂ ಆರ್ಥಿಕ ಗುರಿ ಸಾಧನೆಗೆ ಪ್ರಥಮಾದ್ಯತೆ ನೀಡಬೇಕು. ಆಯಾ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕು. ಬಿಡುಗಡೆಯಾದ ಅನುದಾನ ಮರಳಿ ಹೋಗದಂತೆ ನೋಡಿಕೊಳ್ಳಬೇಕು. ಬಾಕಿ ಉಳಿಸಿದ ಅನುದಾನಕ್ಕೆ ನಿಯಮಾನುಸಾರ ಬಿಲ್ಲುಗಳನ್ನು ಕಾಲಮಿತಿಯೊಳಗೆ ಸಿದ್ಧಪಡಿಸಿ, ನಿಗದಿಪಡಿಸಿದ ಅವಧಿಯೊಳಗೆ ಖಜಾನೆಗೆ ಸಲ್ಲಿಸಬೇಕು. ಈ ಸಂಬಂಧ ಏನಾದರು ತಾಂತ್ರಿಕ ಕಾರಣಗಳು ಎದುರಾದಲ್ಲಿ ಜಿಲ್ಲಾಡಳಿತ ಅಥವಾ ಜಿಲ್ಲಾ ಪಂಚಾಯತ್ ಸಿಇಓ ಅವರ ಗಮನಕ್ಕೆ ತರಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

3 ತಿಂಗಳ ಗಡುವು: ಇಲಾಖಾವಾರು ಪರಿಶೀಲನೆ ವೇಳೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಕಾರ್ಯಕ್ರಮಗಳ

ಪ್ರಗತಿಯ ಬಗ್ಗೆ ಜಿಲ್ಲಾಧಿಕಾರಿಗಳು ಕೇಳಿದರು. ಕೈಮಗ್ಗ ಮತ್ತು ಜವಳಿ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಜಿಲ್ಲೆಯ ಜನರಲ್ಲಿ ಜನಜಾಗೃತಿ ಮೂಡಿಸಿದ್ದೀರಾ? ಅನುದಾನ ಪಡೆದುಕೊಂಡು ಬಳಸಲು ಯಾಕೆ ಕ್ರಮ ವಹಿಸಿಲ್ಲ ಎಂದು ಜಿಲ್ಲಾಧಿಕಾರಿಗಳು ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧಿಕಾರಿಗೆ ಪ್ರಶ್ನಿಸಿದರು. ರಾಯಚೂರು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯುತ್ತಾರೆ. ಹತ್ತಿ ಬೆಳೆಗಾರರಿಗೆ ಇಲಾಖೆಯಿಂದ ಅನುಕೂಲವಾಗದಿದ್ದರೆ ಏನು ಪ್ರಯೋಜನ? ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಅಧಿಕಾರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಲು ನಿರ್ದೇಶನ ನೀಡಿದರು. ಇಲಾಖೆಯ ಕಾರ್ಯಕ್ರಮಗಳ ಪ್ರಗತಿಯನ್ನು ತೋರಿಸಲು 3 ತಿಂಗಳ ಕಾಲಾವಕಾಶ ನೀಡಿದರು. ಕೈಮಗ್ಗ ಮತ್ತು ಜವಳಿ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ವಿಶೇಷ ಸಭೆಗೆ ಸಿದ್ಧತೆಗೆ ಸಮನ್ವಯ ಮಾಡಲು ಇದೆ ವೇಳೆ ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.

ನೊಟೀಸ್ ಜಾರಿಗೆ ಸೂಚನೆ: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳು, ಬಿಡುಗಡೆಯಾದ ಅನುದಾನ ಬಳಕೆಯ ಬಗ್ಗೆ ಸಭೆಯಲ್ಲಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಭೂ ಒಡೆತನ ಸೇರಿದಂತೆ ಬೇರೆ ಬೇರೆ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಮಾಡಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲು ನಿರ್ದೇಶನ ನೀಡಿದರು.

ಕ್ರಿಯಾಯೋಜನೆ ಸಿದ್ಧಪಡಿಸಿ: ರಾಯಚೂರು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿದ್ದಾರೆ. ಹಾಗಾಗಿ ರಾಜ್ಯದಲ್ಲೇ ಅತಿ ಹೆಚ್ಚು ಅನುದಾನ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ ರಾಯಚೂರು ಜಿಲ್ಲೆಗೆ ನಿಗದಿಯಾಗಬೇಕು. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಮುಂದಿನ 2026-27ನೇ ಸಾಲಿನ ಕ್ರಿಯಾಯೋಜನೆಯನ್ನು ಈಗಲೇ ಸಿದ್ಧಪಡಿಸಬೇಕು. ಏಪ್ರೀಲ್ ಅಂತ್ಯದೊಳಗೆ ಕ್ರಿಯಾಯೋಜನೆ ಸಿದ್ಧಪಡಿಸಿದಲ್ಲಿ ಹೆಚ್ಚಿನ ಅನುದಾನ ರಾಯಚೂರು ಜಿಲ್ಲೆಗೆ ನಿಗದಿಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸಲಹೆ ಮಾಡಿದರು.

ಈ ವೇಳೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಅವರು ಮಾತನಾಡಿ, ಜಿಲ್ಲೆಯ ಆಯಾ ಇಲಾಖೆಗಳ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳ ಅನುಷ್ಠಾನಾಧಿಕಾರಿಗಳು ಜಾಗೃತಿ ವಹಿಸಿ ಕಾರ್ಯನಿರ್ವಹಿಸಬೇಕು. ಎಸ್‌ಸಿಪಿ ಮತ್ತು ಟಿಎಸ್‌ಪಿ ಕಾರ್ಯಕ್ರಮಗಳನ್ನು ಹಗುರವಾಗಿ ಪರಿಗಣಿಸಬಾರದು. ಬಿಡುಗಡೆಯಾದ ಅನುದಾನಕ್ಕೆ ಪ್ರತಿಶತ 100ರಷ್ಟು ಸಾಧನೆ ಮಾಡಲೇಬೇಕು. ಎಲ್ಲ ಅನುದಾನವನ್ನು ಬಳಸಬೇಕು. ಕೆಲವು ಇಲಾಖೆಗಳ ಅಧಿಕಾರಿಗಳು ಅನುದಾನ ಬಳಕೆಗೆ ಗಮನ ಹರಿಸುತ್ತಿಲ್ಲ. ಅನುದಾನ ಬಳಕೆ ಮಾಡದೇ ನಿರ್ಲಕ್ಷ್ಯ ವಹಿಸಿದಲ್ಲಿ ಹೊಸ ಕಾಯ್ದೆ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತದೆ ಎಂಬುದರ ಬಗ್ಗೆ ಅರಿವು ಹೊಂದಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರಕಾಶ್ ಚೌವ್ಹಾಣ್, ರಿಮ್ಸ್ ಸಂಸ್ಥೆಯ ನಿರ್ದೇಶಕ ಡಾ.ರಮೇಶ ಬಿ.ಹೆಚ್., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪ್ರವೀಣ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನವೀನ್ ಕುಮಾರ್, ಪಶು ಸಂಗೋಪನೆ ಇಲಾಖೆಯ ಆಡಳಿತಾಧಿಕಾರಿ ಬಿ.ವೈ.ವಾಲ್ಮೀಕಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಡಿ.ಬಡಿಗೇರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ನಾಯಕ, ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜೇಂದ್ರ ಜಲ್ದಾರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಮ್ಮದ್ ಅಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *