ರಾಯಚೂರು ಮಾರ್ಚ್ 11 (ಕರ್ನಾಟಕ ವಾರ್ತೆ): ದೇಶದಲ್ಲಿ ಪ್ರಥಮ ಬಾರಿಗೆ ಸಂಪೂರ್ಣ ಡಿಜಿಟಲ್ ರೀತಿಯಲ್ಲಿ ಜನಗಣತಿ ನಡೆಯಲಿದ್ದು, ಕಾರ್ಯಕ್ಕೆ ನೇಮಿಸಲ್ಪಡುವ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳು ಈ ಜನಗಣತಿ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಹೇಳಿದರು.
ಮಾರ್ಚ್ 11ರ ಬುಧವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮನೆ ಪಟ್ಟಿ ಮತ್ತು ವಸತಿ ಗಣಿತ ಕುರಿತು ಕ್ಷೇತ್ರ ಮಟ್ಟದ ತರಬೇತಿಗಾರರಿಗೆ 3 ದಿನಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನಗಣಿತಿಯಲ್ಲಿ ಸ್ವಯಂ ಗಣತಿಯ ಆಯ್ಕೆಯೂ ಲಭ್ಯವಿದೆ. ಮೊದಲ ಹಂತದಲ್ಲಿ ಏ.16ರಿಂದ 30 ದಿನಗಳ ಕಾಲ ಮನೆ ಪಟ್ಟಿ ಕಾರ್ಯ ನಡೆಯಲಿದೆ. 2ನೇ ಹಂತದಲ್ಲಿ ಜನಸಂಖ್ಯಾ ಎಣಿಕೆ ಕಾರ್ಯ 2027ರ ಫೆಬ್ರವರಿಯಲ್ಲಿ ನಡೆಯಲಿದ್ದು, ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಜನಗಣತಿ-2027 ಪ್ರಕ್ರಿಯೆಯ ಪೂರ್ವ ಸಿದ್ಧತೆಗಳು ಆರಂಭಗೊಳ್ಳುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಜನಗಣತಿ ಪ್ರಕ್ರಿಯೆಗೆ ಅವಶ್ಯವಿರುವ ಅಗತ್ಯ ನಕ್ಷೆಗಳು, ನಮೂನೆಗಳನ್ನು ತಯಾರು ಮಾಡುವುದು ಸೇರಿದಂತೆ ಎಲ್ಲ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಜನಗಣತಿ ಕರ್ತವ್ಯ ನಿರ್ವಹಿಸಬೇಕು. ನೋಡಲ್ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿಕೊಂಡು ಸೂಕ್ತ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದ ಮಾಸ್ಟರ್ ಟ್ರೇನರ್ ಸದಾಶಿವಪ್ಪ ಅವರು ಮಾತನಾಡಿ, 2011ರಲ್ಲಿ ಜನಗಣತಿಯು ಹಳೆಯ ಮ್ಯಾನುವೆಲ್ ಪದ್ಧತಿಯಲ್ಲಿ ನಡೆದಿತ್ತು. ಆದರೆ, ಈ ಬಾರಿ ಮೊಬೈಲ್ ಆ್ಯಪ್ ಮೂಲಕ ಡಿಜಿಟಲ್ ಮೋಡ್‌ನಲ್ಲಿ ನಡೆಯಲಿದೆ. ಡಿಜಿಟಲ್ ಮೋಡ್‌ನಲ್ಲಿ ನಡೆಯುವ ಜನಗಣತಿಯು ನಿಖರತೆ ಹಾಗೂ ಪಾರದರ್ಶಕತೆಯಿಂದ ಕೂಡಿರಲಿದೆ. ಇದರಿಂದ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
2027ರ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮೊದಲ ಹಂತದಲ್ಲಿ ಕರ್ನಾಟಕದಲ್ಲಿ ಮನೆಪಟ್ಟಿ ಕಾರ್ಯಾಚರಣೆ 2026ರ ಏ.16ರಿಂದ ಮೇ.15ರ ವರೆಗೆ ಒಂದು ತಿಂಗಳ ಕಾಲ ನಡೆಯಲಿದೆ. ಈ ಮೂವತ್ತು ದಿನಗಳ ಮನೆಪಟ್ಟಿ ಕಾರ್ಯ ಪ್ರಾರಂಭವಾಗುವ ಹದಿನೈದು ದಿನಗಳ ಮೊದಲು ಸ್ವಯಂ ಗಣತಿಯ ಆಯ್ಕೆ ಲಭ್ಯವಿರುತ್ತದೆ. ಎರಡನೇ ಹಂತದ ಜನಗಣತಿ 2027ರ ಫೆಬ್ರುವರಿಯಿಂದ ಆರಂಭವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಜನಗಣಿತಿಯ ಜಿಲ್ಲಾ ನೋಡಲ್ ಅಧಿಕಾರಿ ಸುದರ್ಶನ, ಮಾಸ್ಟರ್ ಟ್ರೆöÊನಿಗಳಾದ ಮಲ್ಲೇಶ ನಾಯಕ, ಮಧು ಸೇರಿದಂತೆ ಇತರರು ಇದ್ದರು. ಜಿಲ್ಲಾಧಿಕಾರಿಗಳ ಕಚೇರಿಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಯ ಸಹಾಯಕ ನಿರ್ದೇಶಕರಾದ ಬಸವರಾಜ ನಾಗರಬೆಂಚಿ ಸ್ವಾಗತಿಸಿದರು. ವನಿತಾ ಅವರು ಕಾರ್ಯಕ್ರಮ ನಿರೂಪಿಸಿದರು.


