ಸಿಂಧನೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ರಾಯಚೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಿಂಧನೂರು ಇವರ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ 2025–26ನೇ ಸಾಲಿನ ದತ್ತಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮವು ಮಂಗಳವಾರ (ಮಾ.10) ರಂದು ಸಿಂಧನೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಡಾ. ಮಾಂತಪ್ಪ ಕೊಡಗಲಿ, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಿಂಧನೂರು ಅವರು ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಕೂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ರಾಧೀಕ ನೆರವೇರಿಸಿದರು. ಸ್ವಾಗತವನ್ನು ಕುಮಾರಿ ಶಕುಂತಲಾ ನೆರವೇರಿಸಿ, ವೇದಿಕೆಯ ಅತಿಥಿಗಳಿಗೆ ಪುಷ್ಪಗುಚ್ಛ ಮತ್ತು ಹೆಗಲುಪಟ್ಟಿ ಹಾಕಿ ಗೌರವಿಸಿದರು. ಪ್ರಾರ್ಥನಾ ಗೀತೆಯನ್ನು ಕುಮಾರಿ ಕಾವೇರಿ ಹಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಶ್ರೀ ವೀರೇಶ ನಾಯಕ ಕನ್ನಾರಿ ಅವರು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾದ್ಯಂತ ಸಾಹಿತ್ಯ ಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸಿಕೊಂಡು ಬರುತ್ತಿದ್ದು, ಕನ್ನಡ ಭಾಷೆ, ಸಾಹಿತ್ಯ, ನೆಲ-ಜಲದ ಅಭಿಮಾನವನ್ನು ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಉದ್ಘಾಟನಾ ನುಡಿಯಲ್ಲಿ ಪ್ರಾಂಶುಪಾಲರಾದ ಡಾ. ಮಾಂತಪ್ಪ ಕೊಡಗಲಿ ಅವರು ಮಹಿಳೆಯರ ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ ಜಾಗೃತಿ ಅಭಿಯಾನಗಳು ನಡೆಯಬೇಕು. ಶಿಕ್ಷಣ, ಸಾಹಿತ್ಯ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚು ಗುರುತಿಸಿಕೊಳ್ಳಬೇಕು. ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸದಲ್ಲಿ ಹಿರಿಯ ವಕೀಲರಾದ ಶ್ರೀಮತಿ ಸಹನಾ ಹಿರೇಮಠ ಮಾತನಾಡಿ, ಕುಟುಂಬ ಹಾಗೂ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಮಹಿಳೆಯರು ಜಾಗೃತರಾಗಬೇಕು. ಮಹಿಳಾ ಕಾಯಿದೆಗಳು ಮತ್ತು ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ ತಿಳಿದು ಸಮಾನತೆಗಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಉಪನ್ಯಾಸಕಿ ಡಾ. ವಿಜಯಲಕ್ಷ್ಮಿ ಮಾತನಾಡಿ, ತಾಯಿ ಸಮಾಜದ ಯಜಮಾನಿಯಾಗಿದ್ದು, ಕರುಣೆ ಮತ್ತು ಸಹಿಷ್ಣುತೆಯ ಪ್ರತಿರೂಪವಾಗಿದೆ. ಇಂದಿನ ಕಾಲದಲ್ಲಿ ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ತರವಾಗಿದೆ ಎಂದು ಹೇಳಿದರು.
ದತ್ತಿದಾನಿಗಳ ಪರಿಚಯವನ್ನು ಉಪನ್ಯಾಸಕರಾದ ಹೆಚ್.ಎಂ. ಶ್ರೀಶೈಲ ಅವರು ಮಾಡಿದರು. ದಿವಂಗತ ದತ್ತಿದಾನಿಗಳಾದ ಶ್ರೀಮತಿ ನಿಂಗವ್ವ ಭೀಮಪ್ಪ ಗುಡ್ಲಾಮನಿ, ಶ್ರೀಮತಿ ಸರಗುಣಮ್ಮ ಸೋಮನಗೌಡ, ಚನ್ನಬಸಯ್ಯ ಸ್ವಾಮಿ ಹಿರೇಮಠ, ಶ್ರೀಮತಿ ಕರಿಬಸಮ್ಮ ಶಿವಲಿಂಗಯ್ಯ ಹಾಗೂ ಶ್ರೀಮತಿ ಎನ್ನಮನಿ ಪ್ರಭಾವತಿ ಸುಬ್ಬರಾವ್ ಅವರನ್ನು ಸ್ಮರಿಸಿ, ಅವರ ಸಮಾಜ ಸೇವೆ ಮತ್ತು ಕೊಡುಗೆಗಳನ್ನು ನೆನಪಿಸಿದರು.
ದತ್ತಿದಾನಿಯಾಗಿ ಮಾತನಾಡಿದ ಕಸಾಪ ಜಿಲ್ಲಾ ಪ್ರತಿನಿಧಿ ಶ್ರೀಮತಿ ರಮಾದೇವಿ ಬೀರಪ್ಪ ಶಂಭೋಜಿ ಅವರು ಮಹಿಳಾ ದಿನಾಚರಣೆ ಕೇವಲ ಆಚರಣೆ ಮಾತ್ರವಾಗದೆ, ಮಹಿಳೆಯರ ಮೇಲೆ ನಡೆಯುವ ಶೋಷಣೆಗಳನ್ನು ತಡೆಗಟ್ಟುವ ಜಾಗೃತಿ ಮೂಡಬೇಕು. ಮಹಿಳೆ ಪುರುಷನಷ್ಟೇ ಸಮಾನಳಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾಳೆ ಎಂದು ಹೇಳಿದರು.
ಕಸಾಪ ಜಿಲ್ಲಾ ಪ್ರತಿನಿಧಿ ಎಸ್. ದೇವೇಂದ್ರಗೌಡ ಮಾತನಾಡಿ, ಸ್ತ್ರೀ–ಪುರುಷರ ನಡುವಿನ ಸಂಬಂಧ ಪ್ರೀತಿ, ವಾತ್ಸಲ್ಯ ಮತ್ತು ಪರಸ್ಪರ ಗೌರವದ ಮೇಲೆ ಆಧಾರಿತವಾಗಿರಬೇಕು ಎಂದು ತಿಳಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಯನ್ನಮನಿ ನರೇಂನಾಥ ಮಾತನಾಡಿ, ಕುಟುಂಬ ಹಾಗೂ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಕರ್ತವ್ಯ ಮತ್ತು ಪಾತ್ರಗಳು ಮಹತ್ವದ್ದಾಗಿದ್ದು, ಅವುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹೆಚ್.ಎಫ್. ಮಸ್ಕಿ ಅವರು ಸಮಾಜದಲ್ಲಿ ಮಹಿಳೆಯರ ನೈತಿಕ ಮೌಲ್ಯಗಳು ಮತ್ತು ಆದರ್ಶಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಮಹಿಳೆಯರು ಆಸಕ್ತಿ ತೋರಬೇಕು ಮತ್ತು ಲಿಂಗಭೇದವಿಲ್ಲದೆ ಸಮಾನತೆ ಸಾಧಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಎಸ್. ಹಿರೇಮಠ (ವಿಶ್ರಾಂತ ಡಿ.ಡಿ.ಪಿ.ಯು ಅಧಿಕಾರಿಗಳು), ಸರಸ್ವತಿ ಪಾಟೀಲ್ (ಮಾಜಿ ಅಧ್ಯಕ್ಷರು ಕಸಾಪ), ಪಿ. ಶ್ರೀದೇವಿ ಶ್ರೀನಿವಾಸ್, ಸುಮಂಗಲ ಚಿಂಚರಕಿ, ಶೈಲಜಾ ಷಡಕ್ಷರಯ್ಯ, ಶಾಂತಾಬಾಯಿ, ಶೋಭಾ, ಶಂಕರ್ ವಾಲೇಕರ್, ಶಿವಮೂರ್ತಿ ಹಿರೇಮಠ, ಉಮಾಶಂಕರ್, ಡಾ. ಬಸವರಾಜ್ ನಾಯಕ್, ವನ್ನೂರು ಕಟ್ಟಿಮನಿ ಸೇರಿದಂತೆ ಕಾಲೇಜಿನ ಬೋಧಕ ಸಿಬ್ಬಂದಿ, ಕಸಾಪ ಪದಾಧಿಕಾರಿಗಳು ಹಾಗೂ ಪತ್ರಿಕಾ ಮತ್ತು ಸಮೂಹ ಮಾಧ್ಯಮದ ಪ್ರತಿನಿಧಿಗಳು ಉಪಸ್ಥಿತರಿದ್ದರು.

