ರಾಯಚೂರು:ಮಾ,10:
ಜಗತ್ತಿನಾದ್ಯಂತ ಮಹಿಳಾ ದಿನಾಚರಣೆಯು ಹೆಣ್ಣು ಮಕ್ಕಳ ಆಸ್ಥಿತ್ವ, ಗುರಿ ಸಾಧನೆಯನ್ನು ಜಗದೆಲ್ಲಡೆ ಪಸರಿಸುವಂತೆ ಮಾಡುವ ಅಧ್ಭುತ ದಿನವಾಗಿದೆ.
ಇಡಿ ಮಾರ್ಚ್ ತಿಂಗಳು ಮಹಿಳೆಯರ ಕಾರ್ಯ ಚಟುವಟಿಕೆಗಳನ್ನು ಗುರ್ತಿಸುವ ಕಾರ್ಯ ನಿರಂರವಾಗಿ ನಡೆಯುವುದು. ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಪತ್ನಿಯಾಗಿ, ಮಗಳಾಗಿ ತನ್ನದೇ ಆದ ಪಾತ್ರಗಳನ್ನು ನಿಭಾಯಿಸುತ್ತಾಳೆ. ಈ ಎಲ್ಲ ಪಾತ್ರಗಳನ್ನು ನಮ್ಮ ಸಾಮಾಜಿಕ ವ್ಯವಸ್ಥೆಯು ವಿವಿಧ ಆಯಾಮಗಳಿಂದ ವಯೋಮಾನದ ಆದ್ಯತೆಗೆ ಅನುಗುಣವಾಗಿ ಅವರನ್ನು ಅವಲಂಬಿಸುತ್ತದೆ. ಅವರಿಂದ ಪೊರೆಯಲ್ಪಡುತ್ತದೆ. ಇವೆಲ್ಲವುಗಳನ್ನು ತಮ್ಮ ಮನಸ್ಸಿನ ಕನಸುಗಳನ್ನು ರಂಗೋಲಿಯ ಸ್ಪರ್ಧೆಯ ಮೂಲಕ ರಾಯಚೂರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಯವರು ಕೃಷ್ಣ ಸಭಾಂಗಣದಲ್ಲಿ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ.
ಭ್ರೂಣದ ಹಂತದಿಂದಲೆ ಹೆಣ್ಣಿನ ಕಾಳಜಿ ಮಾಡಿದರೆ ಕೇವಲ ತನಗಾಗಿಯಲ್ಲ, ಸಮಾಜಕ್ಕೆ ವಿವಿಧ ಹುದ್ದೆಗಳಿಂದ ಸೇವೆ, ಕ್ರೀಡೆ ಮೂಲಕ ದೇಶಕ್ಕೆ ಕೊಡುಗೆಗಳ ಹೆಮ್ಮರವನ್ನೆ ನೀಡುವ ಅಧ್ಭುತ ಸಾಧಕಿಯಾಗುವಳು ಎಂಬ ನಾಗರತ್ನರ ಬಹುಬಣ್ಣದ ಚಿತ್ತಾರ ವಿಶೇಷವಾಗಿತ್ತು.
ಯಾವುದೇ ವೃತ್ತಿಪರ ಕಲಾವಿದರಿಗೆ ಕಡಿಮೆ ಇಲ್ಲದಂತೆ ಧೈರ್ಯದಿಂದ ಮುಖ ಭಾವನೆಯೊಂದಿಗೆ ಹೆಣ್ಣಿನ ಜೀವನದ ಕನಸುಗಳಿಗೆ ಬಣ್ಣ ತುಂಬಿ ಎಂಬ ಕನಸಿನ ನುಡಿ ತಿಳಿಸಿದ ಸುವರ್ಣ ಅವರ ದೈರ್ಯ ಅಸಾಧಾರಣವಾದುದು.
ಆಲೋಚನೆಗಳನ್ನು ಕೃತಿರೂಪಕ್ಕೆ ಇಳಿಸಿ, ದೃಢ ವಿಶ್ವಾಸ, ಸಹನೆ, ಪ್ರಾಮಾಣಿಕತೆ, ಧೈರ್ಯ, ಮಮತೆ, ತಾಯ್ತನವನ್ನು ಪ್ರಕೃತಿಯ ರೂಪದಲ್ಲಿ ಶಾಲಿನಿ ರವರು ಕೊಂಡುಯ್ಯುವ ಪ್ರಯತ್ನ ಮಾಡಿದ್ದಾರೆ.
ನಾರಿಶಕ್ತಿ ಸಮಾಜದ ಪ್ರಗತಿ ಎಂಬುದನ್ನು ಗ್ರಾಮೀಣ ಸೊಗಡಿನಲ್ಲಿ ತನ್ನ ಮಗುವನ್ನು ಮಮತೆಯ ಸಮುದ್ರದಲ್ಲಿ ತೆಲಿಸುವ ಪರಿಯುಳ್ಳ ಅಧ್ಬುತ ಕಲೆಯೊಂದಿಗೆ ಯಾವುದೇ ಜವಾಬ್ದಾರಿ ಪರಿಪೂರ್ಣವಾಗಿಸುವ ಗಟ್ಟಿತನವನ್ನು ಗೀತಾ ರವರು ತೋರಿಸುವ ಪ್ರಯತ್ನ ಮಾಡಿದ್ದಾರೆ.
ಆರೋಗ್ಯಕರ ತಾಯಿಗೆ ಆರೋಗ್ಯವಂತ ಮಗು, ಅದರಲ್ಲೂ ಹೆಣ್ಣು ಮಗು ಪ್ರಕೃತಿಯ ವರದಾನ, ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ, ಹೆಣ್ಣುಮಗು ಉಳುಸಿ ಬೆಳಸಿ ಎಂಬ ಸಂದೇಶದೊಂದಿಗೆ ಮೇಘನಾ ರವರ ಕಲ್ಪನೆಯಲ್ಲಿ ಮೂಡಿದೆ. ಇವರ ಇನ್ನೊಂದು ಕೃತಿಯಲ್ಲಿ ಆರೋಗ್ಯ ಸುರಕ್ಷತೆಯಿಂದ ಸುಂದರ ಬದುಕು ಸಾಧ್ಯವೆಂದು ಕೈಯಲ್ಲಿ ಹಣತೆಯೊಂದಿಗೆ ಹೆಜ್ಜೆ ಹಾಕುವ ದೃಶ್ಯ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂಬ ಬಯಕೆಯೋಂದಿಗೆ ಸುಜಾತಾ ಜಮುನಾ ರವರ ನವಿಲು, ಲಕ್ಷ್ಮಿಯವರ ಮಹಿಳೆಯ ಮನಸ್ಸಿನ ಭಾವನೆ, ಶಾರದಾ ಅವರ ಸುಂದರ ರಂಗೋಲಿಗಳು ಆಕರ್ಷಕ ಚಿತ್ತಾರಗಳಾಗಿದ್ದವು.
ಅತ್ಯುತ್ತಮ ರಚನೆ ಎನ್ನುವುದಕ್ಕಿಂತ ಯಾವುದೇ ರೇಖಾಚಿತ್ರ ಬಳಸದೆ ಬಿಡಿಸಿದ ರಂಗೊಲಿಗಳಿಗೆ ಜೀವ ತುಂಬಿದ ಅರೋಗ್ಯ ಇಲಾಖೆಯ ಸಿಬ್ಬಂದಿಯವರ ಸ್ಪೂರ್ತಿ ಎಲ್ಲರಿಗೂ ಮಾದರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರಬಾಬು ಹರ್ಷ ವ್ಯಕ್ತಪಡಿಸಿದರು. ತಿರ್ಪುಗಾರರಾದ ಡಾ ಶೀಲಶ್ರೀ ಪಾಟೀಲ್, ಡಾ ಗಣೇಶ್, ಡಾ ಮಹಮ್ಮದ್ ಶಾಕೀರ್ ರವರಿಂದ ಅಂತಿಮಗೊಳಿಸಿದ್ದು ಬಹುಮಾನವನ್ನು ಗಣ್ಯರ ಸಮ್ಮುಖದಲ್ಲಿ ನೀಡಲಾಗುವುದೆಂದು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ ನಂದಿತಾ ಎಮ್ ಎನ್ ತಿಳಿಸಿದ್ದಾರೆ.

