ಮುದ್ದೇಬಿಹಾಳ: ಬೇಸಿಗೆ ಕಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಂಪು ಕುಡಿಯುವ ನೀರು ಲಭ್ಯವಾಗುವಂತೆ ಮಾಡಲು ನಿಸರ್ಗ ಗೆಳೆಯರ ಬಳಗ, ಮುದ್ದೇಬಿಹಾಳ ವತಿಯಿಂದ ಪಟ್ಟಣದ ಹುಡ್ಕೋ ಕಾಲೋನಿಯ ಮುಖ್ಯ ದ್ವಾರದಲ್ಲಿರುವ ಚನ್ನಮ್ಮ ಸರ್ಕಲ್ ಬಳಿ ಸಾರ್ವಜನಿಕ ನೀರಿನ ಅರವಟಿಗೆಯನ್ನು ಶನಿವಾರ ಉದ್ಘಾಟಿಸಲಾಯಿತು.
ಬೇಸಿಗೆಯ ತೀವ್ರ ಉಷ್ಣತೆಯಲ್ಲಿ ಪ್ರಯಾಣಿಕರು, ಕೂಲಿ ಕಾರ್ಮಿಕರು ಹಾಗೂ ಸಾಮಾನ್ಯ ಜನರು ನೀರಿನ ತೊಂದರೆ ಅನುಭವಿಸದಂತೆ ಮಾಡುವ ಉದ್ದೇಶದಿಂದ ಈ ಅರವಟಿಗೆಯನ್ನು ಸ್ಥಾಪಿಸಲಾಗಿದೆ. ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ನಿಸರ್ಗ ಗೆಳೆಯರ ಬಳಗವು ಪರಿಸರ ಸಂರಕ್ಷಣೆ, ಸಾರ್ವಜನಿಕ ಸೇವೆ ಹಾಗೂ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದೆ.
ಈ ಅರವಟಿಗೆಯ ಮೂಲಕ ಪ್ರತಿದಿನವೂ ಸಾರ್ವಜನಿಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ಜನ ಸಂಚಾರ ಹೆಚ್ಚಿರುವ ಚನ್ನಮ್ಮ ಸರ್ಕಲ್ ಪ್ರದೇಶದಲ್ಲಿ ಈ ವ್ಯವಸ್ಥೆ ಜನರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಸಂಘಟನೆಯ ಸದಸ್ಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಹಾಂತೇಶ ಬೂದಿಹಾಳಮಠ, ಅನಿಲ ತಾರನಾಳ, ಬಸವರಾಜ ನಾಗೂರ, ಮುತ್ತು ಕಂಠಿ, ಪ್ರಭು ನಂದಪ್ಪನವರ, ರಿಯಾಜ ನಾಯ್ಕೊಡಿ, ಅಬ್ದುಲ್ ಗಂಗೂರ, ಶಿವು ಕಂಚ್ಯಾಣಿ, ಶಂಕರ ಸಾಲಿಮಠ, ಮೋನೆಶ ಪತ್ತಾರ, ಶಿವರಾಜ ಹಡಪದ, ಬಂದು ಮೋಮಿನ, ಮೋದಿನ ಕಾರಗನೂರ, ಮಂಜುನಾಥ ಕಬಾಡೆ, ಅನಿಲ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೇಸಿಗೆಯಲ್ಲಿ ಸಾರ್ವಜನಿಕರಿಗೆ ತಂಪು ನೀರು ಒದಗಿಸುವ ಈ ರೀತಿಯ ಸಮಾಜಮುಖಿ ಕಾರ್ಯಗಳು ಮಾನವೀಯತೆಯ ಸಂದೇಶವನ್ನು ಸಾರುತ್ತವೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.

