ಮಸ್ಕಿ: ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ, ಹದ್ದುಬಸ್ತು ಮಾಡಿ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಮಲ್ಲಯ್ಯ ಬಳ್ಳಾ ಮಾತನಾಡಿ ಮೆದಿಕಿನಾಳ ಗ್ರಾಮದ ಸ.ನಂ. 1೦ ಮತ್ತು 11ರಲ್ಲಿ ೫-೧೬ ಗುಂಟೆ ಜಮೀನನ್ನು ಭೂ ಪರಿವರ್ತನೆ ಮಾಡಿಸಿದ್ದಾರೆ.
ಸ.ನಂ. 11ರಲ್ಲಿ ಸುಮಾರು ೩-೨೦ ಗುಂಟೆ ಸರ್ಕಾರಿ ಜಮೀನು ಇದ್ದು, ಅದರ ಜತೆಗೆ ಇನ್ನೊಂದು ಪಕ್ಕದಲ್ಲಿ ಗ್ರಾಮಠಾಣಾ ಜಾಗವಿದ್ದು ಅವುಗಳನ್ನು ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಿಸಿಕೊಂಡಿದ್ದಾರೆ. ಕೂಡಲೇ ಸ.ನಂ. 1೦ ಮತ್ತು 11 ಹಾಗೂ ಗ್ರಾಮಠಾಣಾ ಜಾಗವನ್ನು ಸಂಪೂರ್ಣ ಸರ್ವೇ ಮಾಡಿ ಹದ್ದುಬಸ್ತ್ ಮಾಡಿ ಉಳಿದ ಸರ್ಕಾರಿ ಜಾಗದಲ್ಲಿ ಮಹಿಳೆಯರಿಗೆ ಹೈಟೆಕ್ ಮಹಿಳಾ ಶೌಚಾಲಯ ಮತ್ತು ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕೆಂದರು.
ನಂತರ ಹನುಮಂತಪ್ಪ ವೆಂಕಟಾಪೂರ ಮಾತನಾಡಿ 2007ರಲ್ಲಿ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಭೂ ಕಬಳಿಕೆ ಪ್ರತಿಬಂಧಕ ಕಾಯ್ದೆ ಇದ್ದು, ಉಪಯೋಗಕ್ಕೆ ಬರುತ್ತಿಲ್ಲ. ಖಾಗಿ ವ್ಯಕ್ತಿಯೊಬ್ಬರು ಸರಕಾರಿ ಭೂಮಿಯನ್ನು ಮಾರಾಟ ಮಾಡಲು ಹೇಗೆ ಸಾಧ್ಯ? ಸರ್ಕಾರಿ ಭೂಮಿ, ಗ್ರಾಮಠಾಣಾ ದಾಖಲೆಗಳನ್ನು ಉಪನೋಂದಾಣಾಧಿಕಾರಿಗಳು ಹೇಗೆ ಒಪ್ಪಿಕೊಳ್ಳುತ್ತಾರೆ? ಇದರಲ್ಲಿ ಸ್ಥಳೀಯ ಭ್ರಷ್ಟ ಅಧಿಕಾರಿಗಳು ಪಾಲುದಾರಿಕೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಶಾಮೀಲು ಆಗಿದ್ದಾರೆ ಎಂದು ಆರೋಪಿಸಿದರು. ಸುಮಾರು 2೦ ವರ್ಷಗಳಿಂದ ಇದ್ದ ಮಹಿಳಾ ಸಾರ್ವಜನಿಕ ಶೌಚಾಲಯವನ್ನು ನೆಲಸಮಗೊಳಿಸಿದ್ದಾರೆ. ಇದರಿಂದ ಮಹಿಳೆಯರು ಸಮಸ್ಯೆಯನ್ನು ಅನುಭವಿಸುತ್ತಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು.
ಬೇಡಿಕೆ: ಸರ್ವೆ ನಂಬರ್ 1೦ರ ಸುತ್ತಾ-ಮುತ್ತಾ ಇರುವ ಜಾಗವನ್ನು ಸರ್ವೇ ಮಾಡಿ ಒತ್ತುವರಿಯಾದ ಜಾಗವನ್ನು ತೆರವುಗೊಳಿಸಿ ಹದ್ದುಬಸ್ತ್ ಮಾಡಬೇಕು, ಸರ್ಕಾರಿ ಕಂದಾಯ ಭೂಮಿಯನ್ನು ಒತ್ತುವರಿ ಮಾಡುವಲ್ಲಿ ಸಹಕರಿಸಿದ ಕಂದಾಯ ನೀರಿಕ್ಷಕರು, ಗ್ರಾಮ ಆಡಳಿತಾಧಿಕಾರಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು, ಸರ್ಕಾರಿ ಜಾಗದಲ್ಲಿ ಹೈಟೆಕ್ ಮಹಿಳಾ ಶೌಚಾಲಯ ನಿರ್ಮಿಸಿ ಉಳಿದ ಜಾಗವನ್ನು ಗ್ರಾಮದ ಎಲ್ಲಾ ಜಾತಿಯ ನಿವೇಶನ ರಹಿತರಿಗೆ ಹಂಚಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗೋಪಾಲಪ್ಪ ಪೂಜಾರಿ, ಮೌನೇಶ ಸುಲ್ತಾನಪೂರು, ಶರಣಪ್ಪ ಕಟ್ಟಿಮನಿ, ದಾನಪ್ಪ ಮೆದಿಕಿನಾಳ, ಸಂಪತ್‌ರಾಯ, ನಾಗರಾಜ, ಹನುಮಂತ ಮೆದಿಕಿನಾಳ, ಹನುಮಂತ ಹಂಪನಾಳ, ಶಿವಕಾಂತ, ಲಕ್ಕಪ್ಪ, ಬಸವರಾಜ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *