ರಾಯಚೂರು ಮಾರ್ಚ್ 10 (ಕರ್ನಾಟಕ ವಾರ್ತೆ): ಈ ಹಿಂದೆ ಕೇವಲ ಮನೆಗಷ್ಟೇ ಸೀಮಿತವಾಗಿದ್ದ ಮಹಿಳೆಯು ಇದೀಗ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬಂದು ತನ್ನ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾಳೆ. ಇದು ಮಹಿಳಾ ಸ್ವಾಭಿಮಾನ ಮತ್ತು ಸಬಲೀಕರಣಕ್ಕೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ನಂದಿತಾ ಎಮ್.ಎನ್. ಅವರು ಹೇಳಿದರು.
ಮಾರ್ಚ್ 09ರ ಸೋಮವಾರ ದಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ, ರಾಜಕೀಯ, ಶೈಕ್ಷಣಿಕ, ವಿಜ್ಞಾನ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಮಹಿಳೆ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ಹಮ್ಮಿಕೊಂಡ ರಂಗೋಲಿ ಸ್ಪರ್ಧೆಯು ಹೆಣ್ಣಿನ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿದೆ ಎಂದರು.
ಮಹಿಳಾ ದಿನಾಚರಣೆಯು ಹೆಣ್ಣು ಮಕ್ಕಳ ಅಸ್ತಿತ್ವ, ಗುರಿ ಸಾಧನೆಯನ್ನು ಜಗದೆಲ್ಲಡೆ ಪಸರಿಸುವ ಮಹತ್ವದ ದಿನವಾಗಿದ್ದು, ಇಡೀ ಮಾರ್ಚ್ ತಿಂಗಳು ಮಹಿಳೆಯರ ಕಾರ್ಯ ಚಟುವಟಿಕೆಗಳನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯುವುದು. ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಪತ್ನಿಯಾಗಿ, ಮಗಳಾಗಿ ತನ್ನದೇ ಆದ ಪಾತ್ರಗಳನ್ನು ನಿಭಾಯಿಸುತ್ತಾಳೆ ಎಂದರು.
ಬಹುಬಣ್ಣದ ರಂಗೋಲಿ ಚಿತ್ತಾರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೃಷ್ಣ ಸಭಾಂಗಣದಲ್ಲಿ ಇಲಾಖೆಯ ಮಹಿಳಾ ಸಿಬ್ಬಂದಿಯಿಂದ ನಡೆದ ರಂಗೋಲಿ ಸ್ಪರ್ಧೆಯು ಸ್ತ್ರೀ ಶಕ್ತಿಯನ್ನು ಪ್ರತಿಬಿಂಬಿಸುವಂತಿತ್ತು.
ಭ್ರೂಣದ ಹಂತದಿಂದಲೇ ಹೆಣ್ಣಿನ ಕಾಳಜಿ ಮಾಡಿದಲ್ಲಿ ಮಹಿಳೆಯು ಕೇವಲ ತನಗಾಗಿಯಲ್ಲ, ಸಮಾಜಕ್ಕೆ, ದೇಶಕ್ಕೆ ಕೊಡುಗೆಗಳನ್ನು ನೀಡುವ ಅದ್ಭುತ ಸಾಧಕಿಯಾಗುತ್ತಾಳೆ ಎಂಬುದನ್ನು ನಾಗರತ್ನ ಅವರ ರಂಗೋಲಿ ಸಂದೇಶ ನೀಡಿತು.
ಯಾವುದೇ ವೃತ್ತಿಪರ ಕಲಾವಿದರಿಗೆ ಕಡಿಮೆ ಇಲ್ಲದಂತೆ ಧೈರ್ಯದಿಂದ ಮುಖ ಭಾವನೆಯೊಂದಿಗೆ ಹೆಣ್ಣಿನ ಜೀವನದ ಕನಸುಗಳಿಗೆ ಬಣ್ಣ ತುಂಬಿ ಎಂಬ ಕನಸಿನ ಸಂದೇಶವನ್ನು ಸುವರ್ಣ ಅವರ ರಂಗೋಲಿ ತಿಳಿಸಿತು.
ಮಹಿಳೆಯು ತನ್ನ ಆಲೋಚನೆಗಳನ್ನು ಕೃತಿರೂಪಕ್ಕೆ ಇಳಿಸಿ, ದೃಢ ವಿಶ್ವಾಸ, ಸಹನೆ, ಪ್ರಾಮಾಣಿಕತೆ, ಧೈರ್ಯ, ಮಮತೆ, ತಾಯ್ತನವನ್ನು ಪ್ರಕೃತಿಯ ರೂಪದಲ್ಲಿ ಕೊಂಡೋಯ್ಯುವ ಪ್ರಯತ್ನ ಮಾಡುವ ಅರ್ಥವನ್ನು ಶಾಲಿನಿ ಅವರ ರಂಗೋಲಿ ಹೊರಹೊಮ್ಮಿಸಿತು.
ನಾರಿಶಕ್ತಿ ಸಮಾಜದ ಪ್ರಗತಿ ಎಂಬುದನ್ನು ಗ್ರಾಮೀಣ ಸೊಗಡಿನಲ್ಲಿ ತನ್ನ ಮಗುವನ್ನು ಮಮತೆಯ ಸಮುದ್ರದಲ್ಲಿ ತೇಲಿಸುವ ಪರಿಯುಳ್ಳ ಅದ್ಭುತ ಕಲೆಯೊಂದಿಗೆ ಯಾವುದೇ ಜವಾಬ್ದಾರಿ ಪರಿಪೂರ್ಣವಾಗಿಸುವ ಗಟ್ಟಿತನವನ್ನು ತೋರಿಸುವ ಪ್ರಯತ್ನದ ಅರ್ಥವನ್ನು ಗೀತಾ ಅವರು ತಮ್ಮ ರಂಗೋಲಿ ಮೂಲಕ ನೀಡಿದರು.
ಮೇಘನಾ ಅವರು ಬಿಡಿಸಿದ ರಂಗೋಲಿಯು, ಆರೋಗ್ಯಕರ ತಾಯಿಗೆ ಆರೋಗ್ಯವಂತ ಮಗು, ಅದರಲ್ಲೂ ಹೆಣ್ಣು ಮಗು ಪ್ರಕೃತಿಯ ವರದಾನ, ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ, ಹೆಣ್ಣುಮಗು ಉಳಿಸಿ, ಬೆಳಿಸಿ ಎಂಬ ಸಂದೇಶವನ್ನು ನೀಡಿತು.
ಲಕ್ಷ್ಮೀ ಅವರ ರಂಗೋಲಿಯು ಆರೋಗ್ಯ ಸುರಕ್ಷತೆಯಿಂದ ಸುಂದರ ಬದುಕು ಸಾಧ್ಯ ಎಂದು ಕೈಯಲ್ಲಿ ಹಣತೆಯೊಂದಿಗೆ ಹೆಜ್ಜೆ ಹಾಕುವ ದೃಶ್ಯ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂಬ ಸಂದೇಶವನ್ನು ನೀಡಿತು.
ಈ ವೇಳೆ ತೀರ್ಪುಗಾರರಾದ ಡಾ.ಶೀಲಶ್ರೀ ಅವರು ಮತನಾಡಿ, ಅತ್ಯುತ್ತಮ ರಚನೆ ಎನ್ನುವುದಕ್ಕಿಂತ ಯಾವುದೇ ರೇಖಾಚಿತ್ರ ಬಳಸದೆ ಬಿಡಿಸಿದ ರಂಗೋಲಿಗಳನ್ನು ಅಂತಿಮಗೊಳಿಸಿದ್ದು, ಬಹುಮಾನವನ್ನು ಮುಂದಿನ ದಿನಗಳಲ್ಲಿ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ನೀಡಲಾಗುವುದೆಂದು ತಿಳಿಸಿದರು.



