ನವದೆಹಲಿ: ಸಂಸದರಾದ ಜಿ. ಕುಮಾರ್ ನಾಯಕ ಅವರು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ವೀರೇಂದ್ರ ಕುಮಾರ್ ಅವರಿಗೆ ಪತ್ರ ಬರೆದು, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಆಸನಗಳ ಮತ್ತು ರಾಜ್ಯ ಸೇವೆಗಳಲ್ಲಿನ ನೇಮಕಾತಿಗಳ ಮೀಸಲು) ಅಧಿನಿಯಮ, 2022 ಅನ್ನು ಭಾರತ ಸಂವಿಧಾನದ ಒಂಬತ್ತನೇ ಅನುಕ್ರಮಣಿಕೆ (Ninth Schedule) ಯಲ್ಲಿ ಸೇರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ ಸರ್ಕಾರದಿಂದ ಅಂಗೀಕರಿಸಲ್ಪಟ್ಟ ಈ ಕಾಯ್ದೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡ (ST) ಸಮುದಾಯಗಳಿಗೆ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಹೆಚ್ಚುವರಿ ಮೀಸಲು ಕಲ್ಪಿಸುವ ಉದ್ದೇಶ ಹೊಂದಿದೆ. ಆದರೆ ಈ ಕಾಯ್ದೆಯನ್ನು ಸಂವಿಧಾನದ ಒಂಬತ್ತನೇ ಅನುಕ್ರಮಣಿಕೆಯಲ್ಲಿ ಸೇರಿಸುವ ಪ್ರಸ್ತಾವನೆ ಮೂರು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಿರ್ಣಯವಾಗದೆ ಬಾಕಿ ಉಳಿದಿರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಕುರಿತು ತ್ವರಿತ ನಿರ್ಧಾರ ಕೈಗೊಳ್ಳದಿದ್ದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ನೀಡಬೇಕಾದ ಸಂವಿಧಾನಾತ್ಮಕ ರಕ್ಷಣೆಯು ಹಾಗೂ ಸಾಮಾಜಿಕ ನ್ಯಾಯದ ಆಶಯಗಳು ವಿಳಂಬವಾಗುವ ಸಾಧ್ಯತೆ ಇದೆ ಎಂದು ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾಗೆಯೇ, ರಾಜ್ಯ ಸರ್ಕಾರದ ಈ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ ಪ್ರಸ್ತುತ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿಯೇ ಈ ವಿಷಯವನ್ನು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಈ ವಿಷಯಕ್ಕೆ ಅಗತ್ಯ ಪ್ರಾಮುಖ್ಯತೆ ನೀಡಬೇಕೆಂದು ತಮ್ಮ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *