ರಾಯಚೂರು : ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಲ್ಲಿಯ ಪೊಲೀಸ್‌ ಕವಾಯತು ಮೈದಾನದಲ್ಲಿ ಭಾನುವಾರ ಮಹಿಳೆಯರ ಗೌರವಾರ್ಥ ವಿಶೇಷ. ಪರೇಡ್‌ ನಡೆಯಿತು,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾತನಾಡಿ, ‘ಬೆಂಗಳೂರಲ್ಲಿ ಪೊಲೀಸ್‌ ಇಲಾಖೆಯಿಂದ ಮೊದಲ ಬಾರಿಗೆ ಮಹಿಳೆಯರ ವಿಶೇಷ ಪರೇಡ್‌ ಆಯೋಜಿಸಲಾಗಿತ್ತು.
ರಾಜಧಾನಿ ಹೊರತು ಪಡಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ರಾಯಚೂರಲ್ಲಿ ವಿಶೇಷ ಪರೇಡ್‌ ನಡೆಸಿ ಮಹಿಳೆಯರಿಗೆ ಗೌರವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

‘ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿ ಸಹ ದೇಶ ಹಾಗೂ ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ನೆರವಾಗುತ್ತಿದ್ದಾರೆ. ಮಹಿಳೆಯರು, ಮಕ್ಕಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಹೆಚ್ಚು ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಹೇಳಿದರು.

ನಂತರ ಅರುಣಾಂಗ್ಷು ಗಿರಿ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಜಿಲೆಯ ವಿವಿಧ ಪೊಲೀಸ್‌ ಠಾಣೆಗಳ 38 ಸಿಬ್ಬಂದಿಗೆ ಪ್ರಶಂಸಾ ಪತ್ರಗಳನ್ನು ವಿತರಿಸಿದರು.

ಪೊಲೀಸ್‌ ಅಧಿಕಾರಿಗಳು, ಮಹಿಳಾ ಕಾನ್‌ಸ್ಟೆಬಲ್, ಡಿಎಆರ್, ವೈರ್‌ಲೆಸ್, ಮಿನಿಸ್ಟ್ರಿಯಲ್ ಸ್ಟಾಫ್ ಸೇರಿ ಒಟ್ಟು 116 ಮಹಿಳಾ ಪೊಲೀಸ್‌ ಸಿಬ್ಬಂದಿ ಪೊಲೀಸ್‌ ಪರೇಡ್‌ನಲ್ಲಿ ಭಾಗವಹಿಸಿದ್ದರು.

ಮಹಿಳಾ ಪೊಲೀಸ್‌ ಅಧಿಕಾರಿಗಳಾದ ಸದರ್‌ ಬಜಾರ್‌ ಪಿಎಸ್‌ಐ ದೇವಮ್ಮ, ಪಿಎಸ್‌ಐ ಅಶ್ವಿನಿ, ಕಾನ್‌ಸ್ಟೆಬಲ್ ಲಕ್ಷ್ಮಿ, ಡಿಎಆರ್‌ನ ರಮ್ಯಾ ತಮ್ಮ ವೃತ್ತಿ ಅನುಭವ ಹಂಚಿಕೊಂಡರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ಮಹಿಳೆಯರ ಗೌರವಾರ್ಥ ವಿಶೇಷ ಪರೇಡ್‌ ಆಯೋಜಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಝಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಬಾಹ್ಯಾಕಾಶಕ್ಕೆ ಹಾರಿದ ಭಾರತೀಯ ಮೂಲದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ, 300 ದಿನಗಳಿಗಿಂತ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಬಹು ಕಾರ್ಯಾಚರಣೆಗಳನ್ನು ನಡೆಸಿದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರ ಭಾವಚಿತ್ರಗಳನ್ನು ಆಮಂತ್ರಣ ಪತ್ರಿಕೆಯಲ್ಲೇ ಮುದ್ರಿಸಿ ಗೌರವ ಸಮರ್ಪಿಸಿದ್ದು ವಿಶೇಷವಾಗಿತ್ತು.

ತಿಳಿ ಗುಲಾಬಿ ಬಣ್ಣದ ಬಟ್ಟೆ ಬಳಸಿ ವೇದಿಕೆ ನಿರ್ಮಿಸಲಾಗಿತ್ತು. ವೇದಿಕೆಯಲ್ಲಿ ಗುಲಾಬಿ ಬಣ್ಣದ ಪುಷ್ಪಗುಚ್ಛಗಳನ್ನು ಇರಿಸಲಾಗಿತ್ತು. ಕಾರ್ಯಕ್ರಮಕ್ಕೆ ಪೊಲೀಸ್‌ ಬ್ಯಾಂಡ್‌ ವಿಶೇಷ ಮೆರುಗು ನೀಡಿತು. ಇಲಾಖೆಯಿಂದ ಮಹಿಳೆಯರಿಗೆ ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿವೈಎಸ್‌ಪಿ ಶಾಂತವೀರ, ಡಿಎಆರ್ ಡಿವೈೆಎಸ್‌ಪಿ ಘೋಡಕೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *