ರಾಯಚೂರು : ರಾಜ್ಯದ ವಿವಿಧ ಶಿಕ್ಷಣ ಮತ್ತು ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಇರುವ ಗ್ರಂಥಪಾಲಕರ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಗ್ರಂಥಪಾಲಕರ ಸಂಘದ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯದ ವಿಶ್ವವಿದ್ಯಾಲಯಗಳು, ಸರ್ಕಾರಿ ಹಾಗೂ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್, ಎಂಜಿನಿಯರ್ ಕಾಲೇಜುಗಳಲ್ಲಿ ಅನೇಕ ಮಂಜೂರಾದ ಗ್ರಂಥಪಾಲಕರ ಹುದ್ದೆಗಳು 16 ವರ್ಷಗಳಿಂದ ಖಾಲಿ ಇವೆ. ಕೂಡಲೇ ತುಂಬಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ಸಾರ್ವಜನಿಕ ಗ್ರಂಥಾಲಯಗಳು, ಜಿಲ್ಲಾ ಕೇಂದ್ರ ಗ್ರಂಥಾಲಯಗಳು, ನಗರ ಕೇಂದ್ರ ಗ್ರಂಥಾಲಯಗಳು ಹಾಗೂ ತಾಲ್ಲೂಕು ಗ್ರಂಥಾಲಯಗಳಲ್ಲಿಯೂ ಹುದ್ದೆಗಳು ಭರ್ತಿಯಾಗಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜುಗಳ ಗ್ರಂಥಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳಿಗೆ ಸಮರ್ಪಕ ಶೈಕ್ಷಣಿಕ ಮತ್ತು ಸಂಶೋಧನಾ ಮಾರ್ಗದರ್ಶನ ಸಿಗುತ್ತಿಲ್ಲ. ಸಾರ್ವಜನಿಕ ಗ್ರಂಥಾಲಯಗಳ ಸೇವಾಗುಣ ಮಟ್ಟ ಕುಸಿಯುತ್ತಿದೆ. ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಮಾಹಿತಿ ತ್ವರಿತ ಲಭ್ಯತೆಗೆ ಹಿನ್ನಡೆಯಾಗುತ್ತಿದೆ ಎಂದು ವಿವರಿಸಿದ್ದಾರೆ.
ಆದಿಕವಿ ಮರ್ಹಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಮುಖ್ಯ ಗ್ರಂಥಪಾಲಕ ಜಿ.ಎಸ್.ಬಿರದಾರ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಗ್ರಂಥಪಾಲಕ ಮಚೇಂದ್ರನಾಥ.ಎಸ್, ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಮಾನಂದ ಜೆ.ಹಂಗರಗಿ, ಉಪಾಧ್ಯಕ್ಷ ಸತೀಶಕುಮಾರ ಎಸ್., ಕಾರ್ಯದರ್ಶಿ ಸುರೇಶ ಪಾಟೀಲ, ಸದಸ್ಯ ಶೊಭ ಕೆ.ವಿ ಹಾಗೂ ಗ್ರಂಥಪಾಲಕರು ಉಪಸ್ಥಿತರಿದ್ದರು.

