ತಾಳಿಕೋಟಿ: ನಿಮಗೆ ಒಳ್ಳೆಯ ಶಿಕ್ಷಣ ನೀಡಿ ನಿಮ್ಮ ಭವಿಷ್ಯ ಉಜ್ವಲಗೊಳಿಸಲು ಹೆತ್ತವರು ಹಗಲಿರಳು ಕಷ್ಟ ಪಡುತ್ತಾರೆ ಅವರ ನಿರೀಕ್ಷೆ ಹುಸಿಗೊಳಿಸಬೇಡಿ, ಕಠಿಣ ಪರಿಶ್ರಮದಿಂದ ಒಳ್ಳೆಯ ಸಾಧನೆ ಮಾಡುವಂಥವರಾಗಿ ಎಂದು ಮಡಿಕೇಶ್ವರ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಬಸವರಾಜ ಹಂಚಲಿ ಹೇಳಿದರು. ತಾಲೂಕಿನ ಬಿಳೇಭಾವಿ ಗ್ರಾಮದ ಶ್ರೀ ಭಾಗ್ಯವಂತಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಶನಿವಾರ ಮಾತನಾಡಿದರು. ಹೆತ್ತವರು ಮಕ್ಕಳನ್ನು ಹೀಯಾಳಿಸದೆ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ಮಕ್ಕಳಿಗೆ ತಂದೆ ತಾಯಿಗಳು ಮಾದರಿಯಾಗಬೇಕು ಅವರನ್ನು ಕೇವಲ ಅಂಕಗಳಿಕೆಗಾಗಿ ಸಿದ್ಧಪಡಿಸದೆ ಒಳ್ಳೆಯ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡಲು ಪ್ರಯತ್ನಿಸಬೇಕು. ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರಗಳನ್ನು ಕಲಿಸಿ ಕೊಡುವ ಕಾರ್ಯ ಆಗುತ್ತಿರುವುದು ಶ್ಲಾಘನೀಯ, ನಿಮ್ಮೆಲ್ಲರ ಸಹಕಾರ ಇವರಿಗೆ ಇರಲಿ ಎಂದರು. ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ ಶಿಕ್ಷಣ ಸಮುದಾಯದ ಭವಿಷ್ಯವನ್ನು ನಿರ್ಣಯಿಸುತ್ತದೆ ಅದರ ಕುರಿತು ನಿರ್ಲಕ್ಷ ಬೇಡ, ಗುಣಮಟ್ಟದ ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕಾರಗಳನ್ನೂ ಕಲಿಸಿಕೊಡುವ ಕಾರ್ಯ ಆಗಬೇಕಾಗಿದೆ. ಕೇವಲ ಐದು ವರ್ಷಗಳ ಅವಧಿಯಲ್ಲಿ ಈ ಸಂಸ್ಥೆ ಗಮನಾರ್ಹವಾದ ಸಾಧನೆ ಮಾಡಿದೆ ಇದರ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಗೆ ಅಭಿನಂದಿಸುತ್ತೇನೆ ಎಂದರು. ಜಿ.ಪಂ.ಮಾಜಿ ಸದಸ್ಯ ಬಸನಗೌಡ ವಣಕಿಹಾಳ,ಯುವ ಮುಖಂಡ ಸಂಗನಗೌಡ ಪಾಟೀಲ (ಸಾಸನೂರ) ಮಾತನಾಡಿದರು. ಸಮಾರಂಭದ ಸಾನಿಧ್ಯ ವಹಿಸಿದ್ದ ಸಾಸನೂರ ಗುರುಕುಲದ ಪೀಠಾಧಿಪತಿ ಪೂಜ್ಯ ಅಟವಿ ಶಿವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಷ.ಬ್ರ. ಮಹಾಂತಲಿಂಗ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಮಲ್ಲಣ್ಣ ಗು.ಅಸ್ಕಿ ಅಧ್ಯಕ್ಷತೆ ಹಾಗೂ ಸಂಸ್ಥೆಯ ಅಧ್ಯಕ್ಷ ಮಲ್ಲಣ್ಣ ಚಂ.ಪರಸನಳ್ಳಿ ನೇತೃತ್ವ ವಹಿಸಿದ್ದರು.ಜಿಪಂ ಮಾಜಿ ಸದಸ್ಯ ಎಚ್.ಸಿ. ಪೋಲಿಸ ಪಾಟೀಲ ಹಾಗೂ ಡಾ.ಬಿ.ಎಂ.ಅಳ್ಳಿಕೋಟಿ ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ಹಾಗೂ ನವೋದಯ, ಸೈನಿಕ ಶಾಲೆಗಳಿಗೆ ಆಯ್ಕೆಯಾದ 100 ಮಕ್ಕಳಿಗೆ ಗೌರವಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಿದ್ರಾಮಯ್ಯ ಮಠ ಸ್ವಾಗತಿಸಿದರು.ಶಿಕ್ಷಕ ಮಹೆಮೂದ ಬಾಗಲಕೋಟ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ಟಿ.ವಜ್ಜಲ, ಕಾರ್ಯದರ್ಶಿ ಸಿದ್ದನಗೌಡ ಪರಸನಳ್ಳಿ, ಗುರಣ್ಣಗೌಡ ಗುರಡ್ಡಿ, ಸಾಹೇಬಗೌಡ ರಾರಡ್ಡಿ, ಸಿಆರ್ ಸಿ. ರಾಜು ಮೂರುಮಾನ, ಮಲ್ಲನಗೌಡ ಮಾಳಿ, ಸಂಗಮೇಶ ದೇಸಾಯಿ,ಸಾಹೇಬಗೌಡ ವಠಾರ,ಮು.ಗು.ವಿಷ್ಣು ನಾಯಕ, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ವರ್ಗ, ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *