ಬೆಳಗಾವಿ-ರಾಯಚೂರ ಹೆದ್ದಾರಿಯಲ್ಲಿ ಈಗ ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ ಹೊರಟ ಪಾದಯಾತ್ರಿಗಳ ದಂಡೇ ಕಾಣಸಿಗುತ್ತದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಜನ ಕಡು ಬಿಸಿಲನ್ನು ಲೆಕ್ಕಿಸದೇ ಪಾದಯಾತ್ರೆ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಹೆಜ್ಜೆ ಹಾಕುತ್ತಿದ್ದಾರೆ.
ಸೋಮವಾರ ಸಂಜೆಯಿಂದಲೇ ಪಾದಯಾತ್ರೆ ಆರಂಭಿಸಿರುವ ಭಕ್ತರು ಶುಕ್ರವಾರ ಇಳಿ ಹೊತ್ತಿಗೆ ಬಾಗಲಕೋಟೆ ಜಿಲ್ಲೆಯ ಗಡಿಯನ್ನು ದಾಟಿ ರಾಯಚೂರು ಜಿಲ್ಲೆಯನ್ನು ಪ್ರವೇಶಿಸುತ್ತಾರೆ. ಪ್ರತಿವರ್ಷ ಯುಗಾದಿಯಂದು ಜರುಗುವ ಶ್ರೀಶೈಲ ಮಲ್ಲಿಕಾರ್ಜುನನ ಜಾತ್ರೆಗೆ ಅಪಾರ ಸಂಖ್ಯೆಯ ಭಕ್ತರು ಈ ಭಾಗದಿಂದ ತೆರಳುತ್ತಿದ್ದು, ಈ ವರ್ಷ ಪಾದಯಾತ್ರಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ ಎನ್ನಲಾಗಿದೆ. 6-7 ನೇ ತರಗತಿ ಓದುತ್ತಿರುವ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಪಾದಯಾತ್ರೆ ತೆರಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
30-40 ವರ್ಷಗಳಿಂದಲೂ ಪಾದಯಾತ್ರೆ ತೆರಳುತ್ತಿರುವ ಭಕ್ತರು ‘ನಡೆಯುವ ಶಕ್ತಿ ಇರುವವರೆಗೂ ಮಲ್ಲಯ್ಯನ ದರ್ಶನಕ್ಕೆ ಹೋಗುತ್ತೇವೆ’ ಎನ್ನುತ್ತಾರೆ. ಏನೂ ತೊಂದರೆ ಆಗೋದಿಲ್ಲ. ಮಲ್ಲಯ್ಯನ ಕೃಪೆಯಿಂದ ಸರಳ ರೀತಿಯಲ್ಲಿ ಶ್ರೀಶೈಲ ತಲುಪಿ ದರ್ಶನ ಪಡೆಯುತ್ತೇವೆ ಎಂದು ವಯೋವೃದ್ಧ ಮಹಿಳೆಯರು ಹೇಳಿದರು.
‘ಸಾವಿರಾರು ಜನ ನಡೆದು ಹೋಗುತ್ತಿದ್ದು ಎಲ್ಲರಿಗೂ ಊಟ, ಉಪಹಾರ, ವಿಶ್ರಾಂತಿಗೆ ವ್ಯವಸ್ಥೆ, ಸ್ನಾನಕ್ಕೆ ಬಿಸಿ ನೀರು, ಹಣ್ಣು-ಹಂಪಲ, ಉಚಿತ ಆರೋಗ್ಯ ಸೇವೆ ಹೀಗೆ ಎಲ್ಲದರ ಸೇವೆ ಮಾಡುತ್ತಿರುವ ಪ್ರತಿ ಊರಿನ ಜನರೇ ನಿಜವಾದ ಶ್ರೀಶೈಲ ಮಲ್ಲಯ್ಯನ ಭಕ್ತರು. ಅವರ ಸೇವೆ ಸ್ಮರಣೀಯ ಎನ್ನುತ್ತಾರೆ’ ಗೋಕಾಕದ ಪಾದಯಾತ್ರಿ ಮಲ್ಲಪ್ಪ.
ಶಿರೂರಿನ ಸ್ಮರಣೀಯ ಸೇವೆ: ಬಾಗಲಕೋಟೆ ತಾಲ್ಲೂಕಿನ ಶಿರೂರ ಪಟ್ಟಣದಲ್ಲಿ ಕಳೆದ 15 ವರ್ಷಗಳಿಂದ ಶ್ರೀಶೈಲ ಪಾದಯಾತ್ರಿಗಳಿಗೆ ಸ್ಮರಣೀಯ ಸೇವೆ ಜರುಗುತ್ತಿದೆ. ಮೂರು ದಿನಗಳ ಕಾಲ ಬೆಳಿಗ್ಗೆ ಸ್ನಾನಕ್ಕೆ ಬಿಸಿನೀರು, ಚಹಾ, ಉಪಾಹಾರ, ಆರೋಗ್ಯವರ್ಧಕ ಹುರುಳಿ ಸಂಗಟಿ, ಕಡಕ್ ರೊಟ್ಟಿ, ಮೊಸರು, ಶೇಂಗಾ ಚಟ್ಟಿ, ಬದನೆಕಾಯಿ, ಹೆಸರು ಮತ್ತು ಕಡ್ಲಿಕಾಳು ಪಲ್ಲ್ಯೆ, ಅನ್ನ, ಸಾರು, ಮಜ್ಜಿಗೆಯ ಸೇವೆ ನಿರಂತರವಾಗಿ ಸಾಗುತ್ತಿದೆ.
ಜೊತೆಗೆ ಯಾತ್ರೆಯಿಂದ ಸುಸ್ತಾಗಿ ದಣಿದಿರುವ ಭಕ್ತರ ಕಾಲುಗಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಚೈತನ್ಯ ತುಂಬುವ ಸೇವೆಯನ್ನು ಪಟ್ಟಣದ ಯುವಕರು ಮಾಡುತ್ತಿದ್ದು, ಉಚಿತ ಆರೋಗ್ಯ ಸೇವೆ, ಔಷಧ, ಮಾತ್ರೆ ವಿತರಣೆಯೂ ನಡೆಯುತ್ತಿದೆ.
ಇದರೊಟ್ಟಿಗೆ ದಾರಿಯುದ್ದಕ್ಕೂ ಅನೇಕ ಕಡೆ ಮಜ್ಜಿಗೆ, ಕುಡಿಯುವ ನೀರು, ದ್ರಾಕ್ಷಿ, ಕಲ್ಲಂಗಡಿ, ಬಾಳೆ ಹಣ್ಣು ವಿತರಣೆ, ಕಮತಗಿ, ಅಮೀನಗಡದಲ್ಲಿ ಉದರ ಸಜ್ಜಕ, ಹೋಳಿಗೆ ಊಟದ ಪ್ರಸಾದವೂ ಭಕ್ತರಿಗೆ ಸಿಗುತ್ತದೆ. ರಾಯಬಾಗ ತಾಲ್ಲೂಕಿನ ಸವಸುದ್ದಿ ಗ್ರಾಮದ ಹತ್ತಾರು ಜನ ಯುವಕರ ತಂಡವೊಂದು ಶಿರೂರ ಬಳಿ ಪ್ರತಿವರ್ಷ ತಮ್ಮೂರಿನಿಂದ 13 ಟನ್ ಕಬ್ಬು ತಂದು ಹಾಲು ತಯಾರಿಸಿ ಸೇವೆ ಮಾಡುತ್ತಿದ್ದಾರಲ್ಲದೇ, ಅದೇ ಗ್ರಾಮದ ಮುತ್ನಾಳ ಕುಟುಂಬದವರು ಟನ್ ಗಟ್ಟಲೆ ಬಾಳೆಹಣ್ಣು ಹಾಗೂ 1,500ಕ್ಕೂ ಹೆಚ್ಚು ಕುಡಿಯುವ ನೀರಿನ ಬಾಟಲ್ ವಿತರಣೆಯ ಸೇವೆ ಮಾಡುತ್ತಿದ್ದಾರೆ.

