ಸಿಂಧನೂರು: ನಗರದ ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಫಾರ್ಮಸಿ ಕ್ಷೇತ್ರದ ಪ್ರಮುಖ ವ್ಯಕ್ತಿತ್ವ ಮತ್ತು ಫಾರ್ಮಸಿ ಶಿಕ್ಷಣದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಮಹಾದೇವ್ ಲಾಲ್ ಶ್ರಾಫ್ ಅವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಹಾರ ಹಾಕಿ ಪುಷ್ಪ ನಮನ ಸಲ್ಲಿಸುವ ಮೂಲಕ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಫಾರ್ಮಸಿ ಪ್ರಾಚಾರ್ಯ ವಾಸೀಂ ಹುಸೇನ್ ಅವರು, ಮಹಾದೇವ್ ಲಾಲ್ ಶ್ರಾಫ್ ಅವರು ದೇಶದಲ್ಲಿ ಫಾರ್ಮಸಿ ಶಿಕ್ಷಣದ ಬಲವರ್ಧನೆಗೆ ಅಪಾರ ಕೊಡುಗೆ ನೀಡಿದ ಮಹನೀಯರು ಎಂದು ಹೇಳಿದರು. ಭಾರತದಲ್ಲಿ ಫಾರ್ಮಸಿ ಶಿಕ್ಷಣವನ್ನು ವ್ಯವಸ್ಥಿತವಾಗಿ ರೂಪಿಸಿ ಅಭಿವೃದ್ಧಿಪಡಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ದೃಷ್ಟಿಕೋನ ಮತ್ತು ಶ್ರಮದಿಂದಲೇ ಫಾರ್ಮಸಿ ಶಿಕ್ಷಣ ಇಂದು ದೇಶದಾದ್ಯಂತ ವ್ಯಾಪಕವಾಗಿ ಬೆಳವಣಿಗೆ ಕಂಡಿದ್ದು ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ದೊರಕಲು ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಮಹಾನ ವ್ಯಕ್ತಿಗಳ ಜೀವನದಿಂದ ಪ್ರೇರಣೆ ಪಡೆದು ತಮ್ಮ ಶಿಕ್ಷಣದಲ್ಲಿ ಪರಿಶ್ರಮ ಮತ್ತು ನಿಷ್ಠೆ ತೋರಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಇರ್ಷಾದ್ ಕೆ ಅವರು ಮಾತನಾಡಿ, ಮಹಾದೇವ್ ಲಾಲ್ ಶ್ರಾಫ್ ಅವರ ಜೀವನ ಸಾಧನೆಗಳು ಯುವಪೀಳಿಗೆಗೆ ಮಾದರಿಯಾಗಿವೆ ಎಂದು ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿ ಅವರು ತೋರಿದ ದಾರಿದೀಪದಂತಿರುವ ಸೇವೆಯನ್ನು ಸದಾ ಸ್ಮರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ಡಿ ಫಾರ್ಮಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಹಾನ್ ವ್ಯಕ್ತಿಯ ಜಯಂತಿಯನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಫಾರ್ಮಸಿ ಶಿಕ್ಷಣದ ಮಹತ್ವ ಮತ್ತು ಸೇವಾ ಮನೋಭಾವವನ್ನು ಬಲಪಡಿಸುವ ಪ್ರಯತ್ನ ಮಾಡಲಾಯಿತು.


