ಮಾನ್ವಿ : ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಶರಣಬಸವರಾಜ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು, ಅರೆವೈದ್ಯಕೀಯ ಹಾಗೂ ಇತರೆ ವೃಂದದ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದರಿಂದ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಅಗತ್ಯ ಔಷಧಿಗಳನ್ನು ಕಾಲಕಾಲಕ್ಕೆ ಸಮರ್ಪಕವಾಗಿ ಪೂರೈಸದ ಕಾರಣ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಬೇಕೆಂಬ ಸರ್ಕಾರಿ ಆದೇಶವಿದ್ದರೂ 1973ರಿಂದ ಇಂದಿನವರೆಗೆ ಆರೋಗ್ಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡದೇ ಇರುವುದನ್ನು ಅವರು ಖಂಡಿಸಿದರು. ಆರೋಗ್ಯ ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಬೇಕು, ಕಳೆದ ಐದು ವರ್ಷಗಳಿಂದ ಬಾಕಿ ಇರುವ ಮುಂಬಡ್ತಿಗಳನ್ನು ನೀಡಬೇಕು, ಸೇವಾನಿರತ ವೈದ್ಯರು ಹಾಗೂ ಅಧಿಕಾರಿಗಳಿಗೆ ಉನ್ನತ ವ್ಯಾಸಂಗ ಮತ್ತು ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಬೇಕು, ವರ್ಗಾವಣೆ ಕಾಯ್ದೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ವೈಜ್ಞಾನಿಕವಾಗಿ ಕೌನ್ಸಿಲಿಂಗ್ ವರ್ಗಾವಣೆ ನಡೆಸಬೇಕು ಎಂಬ ಬೇಡಿಕೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಜೊತೆಗೆ ಗುತ್ತಿಗೆ ವೈದ್ಯರು ಹಾಗೂ ನೌಕರರಿಗೆ ಸೇವಾ ಭದ್ರತೆ ಮತ್ತು ಸೂಕ್ತ ವೇತನ ಹೆಚ್ಚಳ ನೀಡಬೇಕು, ಕೇಂದ್ರ ಪುರಸ್ಕೃತ ಯೋಜನೆ ಅಡಿಯಲ್ಲಿ ಕಾರ್ಯನಿರತ ನೌಕರರಿಗೆ ಪ್ರತಿಮಾಸದ ಮೊದಲ ವಾರದಲ್ಲೇ ವೇತನ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು. ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ.11 ರಿಂದ 15ರವರೆಗೆ ಕಪ್ಪುಪಟ್ಟಿ ಧರಿಸಿ ಹೊರರೋಗಿ ಸೇವೆ ನೀಡದೇ ಕೇವಲ ತುರ್ತು ಸೇವೆಗಳನ್ನು ಮಾತ್ರ ಒದಗಿಸಲಾಗುವುದು ಹಾಗೂ ಮಾ.16ರಿಂದ ಅನಿರ್ದಿಷ್ಟಾವಧಿ ಕರ್ತವ್ಯಕ್ಕೆ ಗೈರು ಹಾಜರಾಗಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರವಿಂದ, ಸುಮನ್, ಅಮರ್ ಪಾಟೀಲ್, ಹನುಮೇಶ ನಾಯಕ, ದೇವರಾಜ ವರ್ಮ, ಜೆ.ಅರುಣಕುಮಾರ, ಸುರೇಶಕುರ್ಡಿ, ಹಂಪಣ್ಣ ಚಂಡೂರು, ಭಾಗಯ್ಯನಾಯಕ, ಸುರೇಶಕುಮಾರ, ಸಂಗಮೇಶಮುಧೋಳ್, ವೆಂಕಯ್ಯಶೆಟ್ಟಿ, ತಿಮ್ಮೇಶ, ಹರ್ಷವರ್ಧನ್, ಮರಿಯಪ್ಪ, ಮಲ್ಲಿಕಾರ್ಜುನ, ಶಿವಕುಮಾರ, ಅಕ್ಷಯಕುಮಾರ, ಸೂಗೂರೇಶ ಪಾಟೀಲ್, ಪ್ರದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

