ರಾಯಚೂರು ಮಾರ್ಚ್ 05 (ಕರ್ನಾಟಕ ವಾರ್ತೆ): ರಾಯಚೂರು ಅಂಚೆ ವಿಭಾಗದಿಂದ ವಿಶೇಷ ಅಂಚೆ ಜೀವ ವಿಮಾ ಮೇಳ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.
ಈ ಮೇಳಕ್ಕೆ ಜಿಲ್ಲೆಯ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು, ಗ್ರಾಮೀಣ ಅರೆ-ಸರ್ಕಾರಿ ನೌಕರರು, ಆಟೋ ಚಾಲಕರು, ಸಣ್ಣ ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ಸೇರಿದಂತೆ ವಿವಿಧ ವರ್ಗದ ಸುಮಾರು 490 ಜನರು ಭಾಗವಹಿಸಿದ್ದರು.
ಈ ಮೇಳದ ಮೂಲಕ ಒಟ್ಟು 1.75 ಕೋಟಿ ರೂ. ಪ್ರೀಮಿಯಂ ಸಂಗ್ರಹವಾಗಿದ್ದು, ಕೇಂದ್ರ ಸರ್ಕಾರದ ಜನಪರ ಅಂಚೆ ಜೀವ ವಿಮಾ ಯೋಜನೆಗೆ ಜನರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದೆ.
ಅಂಚೆ ಜೀವ ವಿಮೆ ಯೋಜನೆ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಬೋನಸ್ ಹಾಗೂ ವಿಶ್ವಾಸಾರ್ಹ ಭದ್ರತೆ ನೀಡುವ ಸರಳ ಮತ್ತು ಸುರಕ್ಷಿತ ಯೋಜನೆಯಾಗಿದೆ. ಇದು ಜನರ ಆರ್ಥಿಕ ಭದ್ರತೆಯನ್ನು ಖಚಿತಪಡಿಸುವ ಉದ್ದೇಶದಿಂದ ರೂಪಿಸಲಾದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.
ಮಾರ್ಚ 11ರಂದು ಮತ್ತೆ ಮೇಳ: ಈ ಮಹಾ ಯಶಸ್ಸಿನ ಹಿನ್ನೆಲೆಯಲ್ಲಿ ಜಿಲ್ಲೆಯ ಇನ್ನಷ್ಟು ಜನರಿಗೆ ಯೋಜನೆಯ ಪ್ರಯೋಜನ ತಲುಪಿಸುವ ಉದ್ದೇಶದಿಂದ ರಾಯಚೂರು ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ಶ್ರೀ ಶಿವಾನಂದ ಆರ್.ಎಚ್. ಅವರ ಮಾರ್ಗದರ್ಶನದಲ್ಲಿ ಮಾರ್ಚ್ 11ರಂದು ಮತ್ತೊಮ್ಮೆ ವಿಶೇಷ ಅಂಚೆ ಜೀವ ವಿಮಾ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ. ಜಿಲ್ಲೆಯ ಸಮಸ್ತ ನಾಗರಿಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಯೋಜನೆಯ ಲಾಭ ಪಡೆಯುವಂತೆ ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ರಾಯಚೂರು ವಿಭಾಗ ಅಂಚೆ ಅಧೀಕ್ಷಕರಾದ ಶಿವಾನಂದ ಆರ್.ಎಚ್ ಅವರು ತಿಳಿಸಿದ್ದಾರೆ.

