ಲಿಂಗಸಗೂರು, ಮಾ 6 – ರಾಜ್ಯ ಸರ್ಕಾರ 56 ಸಾವಿರ ಹುದ್ದೆಗಳ ಭರ್ತಿ ಮುಂದಾಗಿದ್ದು, ಹುದ್ದೆಗಳ ಭರ್ತಿಯಲ್ಲಿ ಒಳಮೀಸಲಾತಿಯ ಅನ್ವಯ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿ ಒಳ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು .
ಒಳ ಮೀಸಲಾತಿ ವಿಧೇಯಕವು ರಾಜ್ಯಪಾಲರ ಸಹಿ ಪಡೆದು ಅನುಮೋದನೆಗೊಂಡಿದೆ ಎಂದು ಸಂತೋಷ ಪಡುವ ಸಂದರ್ಭದಲ್ಲಿ ಒಳ ಮೀಸಲಾತಿ ಅನ್ವಯವಾಗದಂತೆ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂಬ ಮಾರ್ಚ್ 16ರ ಸಚಿವ ಸಂಪುಟದ ತೀರ್ಮಾನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಬಗೆದ ಘೋರ ಅನ್ಯಾಯವಾಗಿ ದೆ. ಆ ಮೂಲಕ 35 ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಮಹಾದ್ರೋಹ ಎಸಗಲಾಗಿದೆ. ಸರ್ಕಾರದ ಈ ತೀರ್ಮಾನವನ್ನು ಒಳ ಮೀಸಲಾತಿ
ಹೋರಾಟಗಾರರು, ಸಾಮಾಜಿಕ ನ್ಯಾಯದ ಪರವಿರುವ ಪ್ರಜ್ಞಾವಂತರೆಲ್ಲರೂ ಒಕ್ಕೊರಲಿನಿಂದ ಉಗ್ರವಾಗಿ ಖಂಡಿಸುತ್ತೇವೆ. ಚುನಾವಣೆ ಪೂರ್ವದಲ್ಲಿ ಸರ್ಕಾರ ಬಂದ ಮೊದಲನೇ ಅಧಿವೇಶನದಲ್ಲಿಯೇ ಒಳ ಮೀಸಲಾತಿಯನ್ನು ನಮ್ಮ ಸರ್ಕಾರ ಜಾರಿಗೊಳಿಸುತ್ತದೆ ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿತ್ತು. ಚಿತ್ರದುರ್ಗ ಸಮಾವೇಶದಲ್ಲಿಯೂ ಅದೇ ಭರವಸೆ ನೀಡಲಾಗಿತ್ತು. ಒಳ ಮೀಸಲಾತಿಯನ್ನು ಜಾರಿಗೊಳಿಸುವ ಸರ್ಕಾರ ಬಂದು 2 ವರ್ಷ ಮುಗಿಯುತ್ತಿದ್ದರೂ
ಒಳಮೀಸಲಾತಿ ಅನ್ವಯ 56 ಸಾವಿರ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ. ಪ್ರಾಮಾಣಿಕ ಪ್ರಯತ್ನ ನಡೆಸಲಿಲ್ಲ. ಅಂತಿಮವಾಗಿ ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ಹೋರಾಟದ ಒತ್ತಡಕ್ಕೆ ಮಣಿದು ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿಗೆ ತರುತ್ತೇವೆಂದು ತಾತ್ವಿಕವಾಗಿ ಒಪ್ಪಿಕೊಂಡು 25 ಆಗಸ್ಟ್ 2025 ರಂದು ಆದೇಶ ಹೊರಡಿಸಿದಿರಿ. 2025ರ ಚಳಿಗಾಲದ ಅಧಿವೇಶನದಲ್ಲಿ ಶಾಸನ ಬದ್ದ ಕಾಯ್ದೆ ಮಾಡಿ ಕೊಂಡು ರಾಜ್ಯಪಾಲರಿಂದ ಅಂತಿಮ ಅಂಗೀಕಾರ ಪಡೆಯಲಾಗಿದೆ. ಇಷ್ಟೆಲ್ಲ ಇದ್ದರೂ ಒಳ ಮೀಸಲಾತಿ ಇಲ್ಲದೇ ನೇಮಕಾತಿಗಳನ್ನು ಭರ್ತಿ ಮಾಡುವಂತೆ ಸಚಿವ ಸಂಪುಟ ತೀರ್ಮಾನ ತೆಗೆದುಕೊಳ್ಳುವುದು ಸರ್ಕಾರಕ್ಕೆ ಆತ್ಮಸಾಕ್ಷಿ ಇಲ್ಲ ಎಂಬುದನ್ನು ಸಾರುತ್ತದೆ. ಭಾರತದ ಹಲವಾರು ರಾಜ್ಯದಲ್ಲಿ ಪ.ಜಾತಿ/ಪ.ಪಂಗಡ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನಬದ್ದವಾಗಿ ಮಿಸಲಾತಿ ಪ್ರಮಾಣ ಹೆಚ್ಚಿಸಿ ಅನುಷ್ಠಾನ ಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ ದಿನಾಂಕ 28.12.2022ರಿಂದ ಜಾರಿಗೆ ಬಂದ ಪ.ಜಾ 17% ಮತ್ತು ಪ.ಪಂ 7% ಮಿಸಲು ಪ್ರಮಾಣ ಹೆಚ್ಚಳದಂತೆ ಉದ್ಯೋಗಗಳನ್ನು ನೀಡದೆ ಪರಿಶಿಷ್ಟ ಜಾತಿಗೆ 2% ಕಡಿತ ಎಂದರೆ 1129 ಮತ್ತು ಪರಿಶಿಷ್ಟ ಪಂಗಡಕ್ಕೆ 4% ಕಡಿತ ಎಂದರೆ 2,258 ಒಟ್ಟು ಪ.ಜಾ-ಪ.ಪ ದಲಿತ ಸಮುದಾಯಕ್ಕೆ ಸಿಗಬೇಕಾದ 3387ಕ್ಕು ಹೆಚ್ಚಿನ ಹುದ್ದೆಗಳನ್ನು ತಪ್ಪಿಸಿ 56,432ಹುದ್ದೆಗಳ ಭರ್ತಿಗೆ ಮುಂದಾದ ಪರಿಶಿಷ್ಟ ಜಾತಿಗಳ ವಿರೋಧಿ ನೀತಿಯ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸುತ್ತೇವೆ. ಪರಿಶಿಷ್ಟರ ಮೀಸಲಾತಿ ಹೆಚ್ಚಳದಿಂದ 56% ಮೀಸಲಾತಿಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಆದರೆ ಅರ್ಜಿದಾರರ ಪರ ವಕೀಲರು ಅದಕ್ಕೆ ತಡೆ ನೀಡುವಂತೆ ವಾದ ಮಂಡಿಸಿರುವುದಿಲ್ಲ ಮತ್ತು ನ್ಯಾಯಾಲಯವು ತಡೆಯಾಜ್ಞೆ ನೀಡಿಲ್ಲ. ಹಾಗಾಗಿ 56% ನಂತೆ ನೇರ ನೇಮಕಾತಿ ಮಾಡಿಕೊಳ್ಳಲು ನ್ಯಾಯಾಲವು ತಡೆಯಾಜ್ಞೆ ನೀಡಿದೆ ಎಂಬುದು ಸತ್ಯಕ್ಕೆ ದೂರವಾದ ಮಾತಾಗಿದೆ. ಆದರೂ ಸರ್ಕಾರ ದಿಕ್ಕು ತಪ್ಪಿಸುತ್ತಿರುವುದು ಮಹಾ ಅನ್ಯಾಯವಾಗಿ ದೆ. ಸದಾ ಸಂವಿದಾನ, ಬಾಬಾ ಸಾಹೇಬರೆಂದು ಬಾಯಿ ಬಡಿದುಕೊಳ್ಳುವ ಈ ಸರ್ಕಾರ ನೀತಿಯಲ್ಲಿ ಮಾತ್ರ ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿ ನಡೆದುಕೊಂಡಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕಾದ ಸಮಾಜ ಕಲ್ಯಾಣ ಇಲಾಖೆಯ ಸಚಿವರೇ ಒಳಮೀಸಲಾತಿಗೆ ಅಡ್ಡಲಾಗಿ ನಿಂತಿದ್ದಾರೆ. ಎಲ್ಲಾ ಪರಿಶಿಷ್ಟರಿಗೆ ಸಾಮಾಜಿಕ ನ್ಯಾಯ ಒದಗಿಸುವ ಬದಲು ಸದಾ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಾ ಬಂದಿದ್ದಾರೆ. ಹಾಗಾಗಿ ಇಡೀ ಅಧಿಕಾರಿ ವರ್ಗ ಒಳಮೀಸಲಾತಿ ವಿಫಲಗೊಳಿಸಲು ಕೆಲಸ ಮಾಡುತ್ತಿದೆ. ಈ ಅನ್ಯಾಯಗಳನ್ನು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಪ್ರಜ್ಞಾವಂತರು ಮತ್ತು ಸಮುದಾಯ ಮಾಡು ಇಲ್ಲವೇ ಮಡಿ ಎಂಬ ಅಂತಿಮ ಹೋರಾಟಕ್ಕೆ ಕರೆ ನೀಡುತ್ತಿದೆ. ಮಾರ್ಚ್ 12ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬುದ್ದಿ ಕಲಿಸಲು ಮುಂದಾಗಿದ್ದೇವೆ. ನಮ್ಮ ಅಳಿವು-ಉಳಿವಿನ ಈ ನಿರ್ಣಾಯಕ ಹೋರಾಟದಲ್ಲಿ ತಾವೆಲ್ಲರೂ ತಪ್ಪದೇ ಜೊತೆಗೂಡಬೇಕೆಂದು ಆಗ್ರಹಿಸುತ್ತೇವೆ. ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ ಸಿಆ ಸುಇ-1ಸೇಹಿಮ 2026, ದಿನಾಂಕ 27.02.2026 ಅನ್ನು ತಕ್ಷಣವೆ ಹಿಂಪಡೆಯಬೇಕು ಮತ್ತು ನೇಮಕಾತಿಯಲ್ಲಿ ಒಳಮೀಸಲಾತಿ ಕಡ್ಡಾಯಗೊಳಿಸಿ ಜಾರಿಗೆ ತರಬೇಕು. ರಾಜ್ಯದಲ್ಲಿ ದಲಿತರ ಜನಸಂಖ್ಯೆ 18%ನಷ್ಟಿದೆ. ಹಾಗಾಗಿಯೇ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ರವರು 17%ಗೆ ಪರಿಶಿಷ್ಟ ಜಾತಿಗಳ ಮೀಸಲಾತಿ ಹೆಚ್ಚಿಸಲು ಶಿಫಾರಸ್ಸು ಮಾಡಿರುತ್ತಾರೆ ಮತ್ತು ಅದು ಜಾರಿಯಲ್ಲಿದೆ. ಈ ಸಾಮಾಜಿಕ ನ್ಯಾಯದ ನೀತಿಯನ್ನು ನ್ಯಾಯಾಂಗೀಯ ಸವಾಲುಗಳಿಂದ ರಕ್ಷಿಸಲು ರಾಜ್ಯದ 56% ಮೀಸಲಾತಿ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ, ಸರ್ವ ಪಕ್ಷಗಳ ನಿಯೋಗದೊಂದಿಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ, ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ನೇಮಕಾತಿಗಳಲ್ಲಿ ವಿಶ್ವವಿದ್ಯಾಲಯಗಳು ಒಂದು ಘಟಕ ಎಂದು ಪರಿಗಣಿಸಬೇಕೆನ್ನುವ ಪ್ರಸ್ತಾವನೆಯನ್ನು ಕೈಬಿಡಬೇಕು. ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿ ನೀಡಲೇಬೇಕೆಂದು ಆಗ್ರಹಿಸಿದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪಾಮಯ್ಯ ಮುರಾರಿ, ಹೆಚ್.ಮುರಾರಿ, ಡಿ.ಬಿ.ಸೋಮನಮರಡಿ, ಹನುಮಂತಪ್ಪ ವೆಂಕಟಾಪುರ, ಹನುಮಂತಪ್ಪ ಕುಣೆಕೆಲ್ಲೂರು, ಗ್ಯಾನಪ್ಪ ಕಟ್ಟಿಮನಿ, ರುದ್ರಪ್ಪ ಬ್ಯಾಗಿ, ಶರಣಪ್ಪ ಕಟ್ಟಿಮನಿ, ಉಮೇಶ ಐಹೋಳರ, ಗ್ಯಾನಪ್ಪ ನಿವೃತ್ತ ಶಿಕ್ಷಕರು, ಹುಸೇನಪ್ಪ ಕಳ್ಳಿಲಿಂಗಸುಗೂರು, ಮೋಹನ್ ಗೋಸೆ, ವಿಜಯ ಪೋಳ್, ರಮೇಶ ಗೋಸೆ, ದುರಗಪ್ಪ ಅಗ್ರಹಾರ, ಅಮರೇಶ ವೆಂಕಟಾಪೂರ, ಆಂಜಿನೇಯ ಭಂಡಾರಿ, ಮೌನೇಶ ಐದನಾಳ, ಶಿವರೆಡ್ಡಿ ಆಸ್ಕಿಹಾಳ, ಹುಸೇನಪ್ಪ ಯರಡೋಣಾ ಸೇರಿ ಕಾರ್ಯಕರ್ತರು ಇದ್ದರು.

