ತಾಳಿಕೋಟಿ: ತಾಲೂಕಿನ ನಾವದಗಿ ಗ್ರಾಮ ಬ್ರಹನ್ಮಠದ ಷ.ಬ್ರ.ಶ್ರೀ ರಾಜ ಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವದಲ್ಲಿ ಚಬನೂರ ಗ್ರಾಮದ ಸಿದ್ದೀಪುರುಷ ರಾಮಲಿಂಗೇಶ್ವರ ಮಠದ ಪರಮ ಪೂಜ್ಯರಾದ ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಕೊಡೆಕಲ್ಲದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು ಶ್ರೀ ರಾಜೇಂದ್ರ ಒಡೆಯರ್ ಅವರ ಎಲ್ಲ ಧರ್ಮ ಕಾರ್ಯಗಳಲ್ಲಿ ಬೆನ್ನೆಲುಬಾಗಿ ನಿಂತು ಅವರಿಗೆ ಸಹಕರಿಸುತ್ತಿದ್ದಾರೆ. ಅವರು ತಮ್ಮ ಚಬನೂರಿನ ಮಠದಲ್ಲಿ ಏಪ್ರಿಲ್ ತಿಂಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ತರಬೇತಿ ಕೊಡುವ ಬೇಸಿಗೆ ರಜೆಯ ವಿಶೇಷ ಸಿಬಿರವನ್ನು ಹಮ್ಮಿಕೊಂಡಿದ್ದಾರೆ ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಈ ಕಾರ್ಯಕ್ರಮಕ್ಕೆ ಕಳಿಸಬೇಕು. ಮಕ್ಕಳಿಗೆ ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕಾರಗಳನ್ನು ಕಲಿಸಿಕೊಡುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು. ಸಾಸನೂರ ತುಂಬಿಗೀಯ ಪೂಜ್ಯ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಷ.ಬ್ರ.ಶ್ರೀ ರಾಜ ಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು. ಕಾರ್ಯಕ್ರಮದಲ್ಲಿ ದೇವದುರ್ಗದ ಪರಮ ಪೂಜ್ಯರಾದ ಕಪಿಲ ಸಿದ್ದರಾಮ ಶಿವಾಚಾರ್ಯರು,ದೇವರ ಹಿಪ್ಪರಗಿ ಪರದೇಶಿ ಮಠದ ಶಿವಯೋಗಿ ಶಿವಾಚಾರ್ಯರು, ಕಲ್ಮಠದ ಸಿದ್ದಲಿಂಗ ದೇವರು, ಮಾತೋಶ್ರೀ ಸಾವಿತ್ರಿ ಅಮ್ಮನವರು,ಡಾ.ಗುರುಲಿಂಗಯ್ಯ ಹಿರೇಮಠ,ಶರಣಗೌಡ ಇಬ್ರಾಹಿಂಪೂರ,ರವಿಧಣಿ ದೇಶಮುಖ,ಎಸ್.ಎಸ್.ಹಾವರಗಿ,ಪುರಾಣಿಕ ರಾಚಯ್ಯ ಹಿರೇಮಠ,ಡಾ.ಸೋಮಶೇಖರಯ್ಯ ಹಿರೇಮಠ, ಸಾಹಿತಿ ಬಸವರಾಜ ಗೊರಜಿ ಮತ್ತಿತರರು ಇದ್ದರು.

