ವಿಶೇಷ ಅಭಿಷೇಕ ಮತ್ತು ಅಲಂಕಾರ,ಮಂಗಳಾರತಿ- ಸುತ್ತಮುತ್ತ ಹತ್ತೂರಿಗೆ ಭಾಗ್ಯದೇವತೆ
ದ್ಯಾವಮ್ಮ ದೇವಿಯ ಸನ್ನಿಧಿ ಭಕ್ತರಿಗೆ ಮಾನಸಿಕ ಶಾಂತಿ ಮತ್ತು ಆತ್ಮಸ್ಥೈರ್ಯ ನೀಡುತ್ತದೆ.*ಸಂಕಷ್ಟದ ಸಮಯದಲ್ಲಿ ದೇವಿಯನ್ನು ಸ್ಮರಿಸುವುದು ಅವರಲ್ಲಿ ಧೈರ್ಯವನ್ನು ತುಂಬುತ್ತದೆ. “ತಾಯಿ ಕಾಪಾಡುತ್ತಾಳೆ” ಎಂಬುದು ಅನೇಕ ಭಕ್ತರ ನಂಬಿಕೆ
ಹಲವಾರು ದೇವಾನುದೇವತೆಗಳು ಜನ್ಮ ತಾಳಿದ ಕಲ್ಯಾಣ ನಾಡು ಕಲ್ಯಾಣ ಕರ್ನಾಟಕ ಭಾಗದಲ್ಲಿ ತನ್ನನ್ನು ನಂಬಿ ಬಂದ ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ದೂರ ಮಾಡಿ, ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ತಾಯಿಯಾಗಿ ದ್ಯಾವಮ್ಮ ದೇವಿ ಮನೆಮಾತಾಗಿದ್ದಾರೆ. ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಅನೇಕ ಸತ್ಯ ಪರೀಕ್ಷೆಗಳನ್ನು ಎದುರಿಸಿ ಭಕ್ತರ ಮನಗೆದ್ದ ಹಲವಾರು ದೇವಾನು ದೇವನಗಳ ಸಾಲಿನಲ್ಲಿ ಮಾನ್ವಿ ತಾಲ್ಲೂಕಿನ ದೇವಿಪುರ ಗ್ರಾಮದ ಆರಾಧ್ಯ ದೇವತೆ ಶ್ರೀ ದ್ಯಾವಮ್ಮ ದೇವಿಯು ಒಬ್ಬಳು.
ಹಸಿರು ಸೀರೆ, ಕೆಂಪು ಕುಂಕುಮದ ಅಲಂಕಾರದಲ್ಲಿ ಕಂಗೊಳಿಸುವ ತಾಯಿಯ ದರ್ಶನವೇ ಒಂದು ಭಾಗ್ಯ. ಗ್ರಾಮದಲ್ಲಿ ದ್ಯಾವಮ್ಮ ದೇವಿಯನ್ನು ‘ಗ್ರಾಮದ ರಕ್ಷಕಿ’ ಎಂದು ಪೂಜಿಸಲಾಗುತ್ತದೆ. ಪೂರ್ವಿಕರ ನಂಬಿಕೆಯಂತೆ, ಗ್ರಾಮಕ್ಕೆ ಬರುವ ಸಾಂಕ್ರಾಮಿಕ ರೋಗಗಳು (ಮಾರಿ), ಬರಗಾಲ ಮತ್ತು ಕೆಟ್ಟ ದೃಷ್ಟಿಗಳಿಂದ ಜನಮತ್ತು ಜಾನುವಾರುಗಳನ್ನು ರಕ್ಷಿಸಲು ದೇವಿಯು ನೆಲೆಸಿದ್ದಾಳೆ ಎಂಬ ಗ್ರಾಮಕ್ಕೆ ಇತಿಹಾಸವಿದೆ.ಈ ದೇವಿಯ ಹಲವಾರು ಅವತಾರಗಳು ಪವಾಡಗಳು ಇಂದಿಗೂ ಭಕ್ತರನ್ನು ನಿಬ್ಬೆರಗಾಗಿಸುವ ಐತಿಹಾಸಿಕ ಉದಾಹರಣೆಗಳು ಇಲ್ಲಿವೆ.ಇಲ್ಲಿ ಪ್ರತಿನಿತ್ಯ ಪೂಜೆಗಳು ನಡೆಯುತ್ತವೆ. ವಿಶೇಷವಾಗಿ ಮಂಗಳವಾರ ಮತ್ತು ಶುಕ್ರವಾರಗಳಂದು ದೇವಿಗೆ ವಿಶೇಷ ಪ್ರತಿ ಅಮಾವಾಸ್ಯೆ ಅಲಂಕಾರ ಮತ್ತು ಪೂಜೆ ಸಲ್ಲಿಸಲಾಗುತ್ತದೆ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ದ್ಯಾವಮ್ಮ ದೇವಿಯ ದೇವಸ್ಥಾನದಲ್ಲಿ ನಡೆಯುವ ಜಾತ್ರೆ ಅಥವಾ ಸಿಡಿ ಬಂಡಿ ಉತ್ಸವ ಬಹಳ ಪ್ರಸಿದ್ಧಿ, ಭಕ್ತರು ತಮ್ಮ ಕಷ್ಟಗಳು ತೀರಿದಾಗ ತಾಯಿಗೆ ಹಸಿರು ಬಳೆ, ಸೀರೆ ಮತ್ತು ಕುಂಕುಮವನ್ನು ಅರ್ಪಿಸುತ್ತಾರೆ.ಮಕ್ಕಳಾಗದವರು, ಮದುವೆಯಾಗದವರು ಹಾಗೂ ಆರೋಗ್ಯ ಸುಧಾರಣೆಗೆ ಈ ದೇವಿಗೆ ಹರಕೆ ಹೊತ್ತರೆ ತಾಯಿ ‘ಕಲ್ಪವೃಕ್ಷ’ವಾಗಿ ಬೇಡಿದ್ದನ್ನು ನೀಡುತ್ತಾಳೆ ಎಂಬುದು ಇಲ್ಲಿಯ ಭಕ್ತರ ದೃಢ ನಂಬಿಕೆ.
“ದೇವಿಪುರದ ದ್ಯಾವಮ್ಮ ದೇವಿಯು ತನ್ನ ನಂಬಿದ ಭಕ್ತರ ಸಂಕಷ್ಟಗಳನ್ನು ಹರಿಸುವ ಸಾಕ್ಷಾತ್ ಶಕ್ತಿ ಸ್ವರೂಪಿಣಿ.” ಎಂದು ಹೇಳಲಾಗುತ್ತಿದೆ.
ಪೂರ್ವಿಕರ ಇತಿಹಾಸ:
ಅನೇಕ ವರ್ಷಗಳ ಹಿಂದೆ ಕಾಡಾಗಿದ್ದ ಈ ಪ್ರದೇಶದಲ್ಲಿ ದೇವಿಯು ನೆಲೆಸಿದ್ದಳೆಂದೂ, ಭಕ್ತರೊಬ್ಬರ ಕನಸಿನಲ್ಲಿ ಬಂದು ತನ್ನ ಅಸ್ತಿತ್ವವನ್ನು ತೋರಿಸಿಕೊಟ್ಟಳೆಂದೂ ಹೇಳಲಾಗುತ್ತದೆ. ಅಂದು ಈ ಭಾಗದಲ್ಲಿ ರಾಕ್ಷಸರ ಹಾವಳಿಗೆ ತತ್ತರಿಸಿ, ಹೋಗಿದ್ದ ಜನ ಈ ದೇವಿ ಹತ್ತಿರ ಬಂದು ರಾಕ್ಷಸ ಸಾಮ್ರಾಜ್ಯದಿಂದ ತಮ್ಮನ್ನು ರಕ್ಷಿಸುವಂತೆ ಪರಿಪರಿಯಾಗಿ ತಾಯಿಯನ್ನು ಬೇಡಿಕೊಂಡಾಗ ಭಕ್ತರ ಬಯಕೆಯಂತೆ ರಾಕ್ಷಸ ಸಾಮ್ರಾಜ್ಯದಿಂದ ಭಕ್ತರ ರಕ್ಷಣೆಗೆ ನಿಂತ ಈ ತಾಯಿ ತನ್ನ ಹಲವು ಅವತಾರಗಳಿಂದ ದುಷ್ಟ ರಾಕ್ಷಸ ಸಾಮ್ರಾಜ್ಯವನ್ನು ಸಂಹಾರ ಮಾಡಿ ನಂಬಿದ ಭಕ್ತರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಮೂರ್ತಿ ಸ್ವರೂಪ: ಸಾಮಾನ್ಯವಾಗಿ ದ್ಯಾವಮ್ಮ ದೇವಿಯ ಮೂರ್ತಿಯು ಮಂದಹಾಸ ಬೀರಬಲ್ಲ, ಅಭಯ ಹಸ್ತವನ್ನು ಹೊಂದಿರುವ ಶಾಂತ ಸ್ವರೂಪದ ಶಕ್ತಿಯಾಗಿರುತ್ತದೆ. ಕಣ್ಣುಗಳಲ್ಲಿ ಕರುಣೆ ತುಂಬಿ ತುಳುಕುತ್ತಿರುತ್ತದೆ.ಅಂದಿನಿಂದ ಇಂದಿನವರೆಗೂ ಈ ಕ್ಷೇತ್ರವು ಅತಿಶಯ ಶಕ್ತಿಯ ಕೇಂದ್ರವಾಗಿ ಮಾರ್ಪಟ್ಟಿದೆ.
ಭಕ್ತರ ಸೇವೆ: ಈ ಗುಡಿಯ ನಿರ್ಮಾಣದಲ್ಲಿ ಪ್ರತಿಯೊಬ್ಬ ಭಕ್ತನ ಅಳಿಲು ಸೇವೆಯೂ ಅಡಗಿದೆ. “ನಂಬಿದವರ ಕೈಬಿಡದ ತಾಯಿ” ಎಂಬ ನಂಬಿಕೆಯೇ ಈ ಭವ್ಯ ಗುಡಿಗೆ ಅಡಿಪಾಯ ಹಾಕಲಾಗಿದೆ….!
“ಕಲ್ಲಿನ ಮೂರ್ತಿಯಾದರೂ ಭಕ್ತರ ಭಕ್ತಿಗೆ ಒಲಿದು ಸಾಕ್ಷಾತ್ ದೇವಿಯೇ ಅಲ್ಲಿ ನೆಲೆಸಿದ್ದಾಳೆ ಎಂಬುದು ಜನರ ಅಚಲ ವಿಶ್ವಾಸ.” ಮೂರ್ತಿಯಾಗಿ ಅವತಾರಗೊಂಡು ದುಷ್ಕರ ಸಂಹಾರಕ್ಕೆ ಹಲವಾರು ಅವತಾರಗಳನ್ನು ತಾಳಿ ತನ್ನ ಸತ್ಯ ಪರೀಕ್ಷೆಯಲ್ಲಿ ಗೆದ್ದ ಭಕ್ತರ ಆಸೆಯನ್ನು ಈಡೇರಿಸಿ ಇಂದಿಗೂ ಸಹ ಭಕ್ತರ ಪಾಲಿನ ಕಾಮಧೇನು ಕಲ್ಪವೃಕ್ಷವಾಗಿದ್ದಾಳೆ ಎಂದು ಭಕ್ತರು ಹೇಳುತ್ತಿದ್ದಾರೆ.
ನಂತರದ ದಿನಗಳಲ್ಲಿ ಈ ದೇವಿಯನ್ನು ದ್ಯಾವಮ್ಮ ಎಂಬ ನಾಮ ದೇವಿಪುರ ದ್ಯಾವಮ್ಮ ಎಂದು ಕರೆಯಲ್ಪಟ್ಟು ದ್ಯಾವಮ್ಮ ದೇವಿ ಎಂಬ ನಾಮದಿಂದ ಜಗತ್ಪ್ರಸಿದ್ದಳಾಗಿದ್ದಾಳೆ ಎನ್ನುವ ಪ್ರತೀತಿ ಇದೆ. ಇಂದಿಗೂ ಈ ಸಹ ದೇವಿಪುರ ದ್ಯಾವಮ್ಮ ದೇವಿಯ ಲಕ್ಷಾಂತರ ಭಕ್ತರು ತಮ್ಮ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಲಿ ಎಂದು ಹಲವು ರೀತಿಯ ಹರಕೆ ಹೊತ್ತು ದೇವಿಯ ದರ್ಶನಕ್ಕೆ ಬರುತ್ತಾರೆ.
ಪ್ರತಿ ವರ್ಷ ಫಾಲ್ಗುಣ ಮಾಸದ ಕೊನೆಯ ಬುಧವಾರದಂದು ನಡೆಯುವ ಈ ದ್ಯಾವಮ್ಮ ದೇವಿಯ ಜಾತ್ರೆಗೆ, ಲಕ್ಷಾಂತರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗುತ್ತಿದೆ. ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಹರಕೆಗಳನ್ನು ತೀರಿಸಿ ದೇವಿಯು ಕೃಪೆಗೆ ಪಾತ್ರರಾಗುತ್ತಾರೆ. ಅದೇ ರೀತಿ ಈ ವರ್ಷವೂ ಮಾರ್ಚ್ 10 -11 ದಿನಾಂಕದಂದು ಎರಡು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಶ್ರೀ ದ್ಯಾವಮ್ಮ ದೇವಿ ಮತ್ತು ಶ್ರೀ ಚೌಡಮ್ಮ ದೇವಿರ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟು ಹತ್ತಿರದ ತುಂಗಾ ನದಿಯಲ್ಲಿ ಗಂಗೆ ಪೂಜೆ ಸಲ್ಲಿಸಿ ನಂತರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಸಿ. ಡೊಳ್ಳು ವಾದ್ಯ ಮೇಳದೊಂದಿಗೆ ಮಹಿಳೆಯರು ಕಳಸ ಕುಂಭದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿ ಪೂಜೆ ನೈವೇದ್ಯ ಅರ್ಪಿಸಿ ಸಾಯಂಕಾಲ ಸಿಡಿಬಂಡಿ ಹಾಗೂ ಮಹಾ ರಥೋತ್ಸವ ಸೇರಿದಂತೆ ಹಲವಾರು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ.


