ರಾಯಚೂರು,ಮಾ.05:
ಪ್ರಸಕ್ತ ವರ್ಷ ಬಿಸಿಲಿನ ತಾಪಮಾನವು ಹೆಚ್ಚಾಗುವ ಬಗ್ಗೆ ಭಾರತೀಯ ಹವಮಾನ ಇಲಾಖೆಯ ನಿರಂತರ ಮುನ್ಸೂಚನೆ ನೀಡುತ್ತಿದ್ದು, ಕಡು ಬಿಸಿಲಿನಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಹಾಗೂ ಅವುಗಳ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರು ಹೆಚ್ಚಿನ ಕಾಳಜಿ ವಹಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರ ಬಾಬು ಮನವಿ ಮಾಡಿದ್ದಾರೆ.
ಬಿಸಿಲಿನ ತಾಪಮಾನದಿಂದ ರಕ್ಷಿಸಿಕೊಳ್ಳಲು ಮತ್ತು ಬಿಸಿಲಿನ ಬೇಗೆಯಿಂದ ಶಾಖಾಘಾತಕ್ಕೊಳಗಾದಾಗ ತಕ್ಷಣ ಕೈಗೊಳ್ಳಬೇಕಾದ ಮುಂಜಾಗೃತೆ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ನಿರ್ದೇಶನ ಹಾಗೂ ಹವಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮದ ಮಾರ್ಗದರ್ಶನದಂತೆ ಈ ಕೆಳಕಂಡಂತೆ ಜಾಗೃತಿ ವಹಿಸಲು ವಿನಂತಿಸಿದ್ದಾರೆ.
ಏನು ಮಾಡಬೇಕು:
ಮನೆಯ ಹೊರಗೆ ಹೋಗುವಾಗ ಸಡಿಲವಾದ, ತೆಳು ಬಣ್ಣದ
ಹತ್ತಿಯ ಬಟ್ಟೆ ಧರಿಸಬೇಕು. ಜೋತೆಯಲ್ಲಿ ಕುಡಿಯುವ ನೀರನ್ನು ಇಟ್ಟುಕೊಳ್ಳುವುದು.
ನಿರಂತರವಾಗಿ ನೀರು, ಮಜ್ಜಿಗೆ, ಎಳೆನೀರು ಕುಡಿಯಬಹುದು. ಹಣ್ಣಿನ ರಸ, ಪಾನಕಗಳನ್ನು ಕುಡಿಯಬಹುದು. ಅಲ್ಲದೆ ಓಆರ್‌ಎಸ್ ಜೀವಜಲ ತಯಾರಿಸಿ ಕುಡಿಯಬೇಕು. ಕರವಸ್ತ್ರ, ಟಿಶ್ಯು ಪೇಪರ್‌ನಿಂದ ಬೆವರನ್ನು ಒರೆಸಿಕೊಳ್ಳಬೇಕು. ನಿರ್ಜಲಿಕರಣವೆನಿಸಿದರೆ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರನ್ನು ಕುಡಿಯಿರಿ. ಆದಷ್ಟು ಮಸಾಲೆ ರಹಿತ, ಶುದ್ದ ಆಹಾರ ಸೇವಿಸಬೇಕು.
ಗಾಳಿಯಾಡುವಂತಹ
ಪಾದರಕ್ಷೆ ಧರಿಸಿರಿ ಎಂದು ತಿಳಿಸಿದ್ದಾರೆ.
ಬಿಸಿಲಿನಲ್ಲಿ ಅಸ್ವಸ್ಥತೆ ಕಂಡುಬಂದರೆ:
ಯಾರಾದರೂ ಬಿಸಿಲಿನ ಪ್ರಕರತೆಯಿಂದ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸಿದ್ದಲ್ಲಿ, ಕೂಡಲೇ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿರಿ. ತಕ್ಷಣ ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕೆತ್ತಿ ಆರೈಕೆ ಮಾಡಿ. ಆತ/ಆಕೆಯ ಹಣೆ, ಕತ್ತು, ಪಾದ ತೊಡೆಯ ಸಂದುಗಳನ್ನು ಒದ್ದೆ ಬಟ್ಟೆಯಿಂದ ಒರೆಸಿರಿ (ತಂಪಾದ ಅಥವಾ ಐಸ್ ನೀರಿನಿಂದ ಒರೆಸಬೇಡಿ) ಚರ್ಮ ಕೆಂಪಾದರೆ, ಬೆವರು ಕಡಿಮೆಯಾದರೆ, ದೇಹದ ಉಷ್ಣತೆ ಜಾಸ್ತಿಯಾದರೆ, ದೀರ್ಘವಾದ ತೀರ್ವ ಉಸಿರಾಟವಿದ್ದಲ್ಲಿ ತುರ್ತಾಗಿ ವೈದ್ಯರನ್ನು ಸಂಪರ್ಕಿಸಬೇಕು.
ಏನು ಮಾಡಬಾರದು:
ಬಿಗಿಯಾದ, ಗಾಢ ಬಣ್ಣದ, ಸಿಂಥೆಟಿಕ್ ಬಟ್ಟೆ ಧರಿಸಬಾರದು. ಕುಷನ್‌ಯುಕ್ತ ಕುರ್ಚಿಯಲ್ಲಿ ಸತತವಾಗಿ ಕೂಡಬಾರದು. ಸೋಡಾ ಇತ್ಯಾದಿ ಕಾರ್ಬೋನೇಟೆಡ್ ತಂಪು ಪಾನಿಯಗಳನ್ನು ಕುಡಿಯಬೇಡಿ ( ಬಾಯಾರಿಕೆಯಾದಾಗ ಕಡ್ಡಾಯವಾಗಿ ನೀರು ಕುಡಿಯಬೇಕು).
ಬೆವರನ್ನು ಒರೆಸಲು ಒರಟಾದ ಬಟ್ಟೆಯನ್ನು ಉಪಯೋಗಿಸಬೇಡಿ. ಕಾಫಿ, ಟೀ, ಅತಿ ಸಕ್ಕರೆ ಅಂಶವುಳ್ಳ ಪಾನೀಯ ಅತಿಯಾಗಿ ಸೇವಿಸಬಾರದು. ಬಿಸಿಯಾದ ಮಸಾಲೆಯುಕ್ತ ಆಹಾರ ತಿನ್ನಬಾರದು. ಮಾಂಸಹಾರ ಸೇವನೆ ಮತ್ತು ಮಧ್ಯಪಾನ ವರ್ಜಿಸಬೇಕು. ಬಿಗಿಯಾದ ಗಾಳಿಯಾಡದ ಪಾದರಕ್ಷೆ ಅಥವಾ ಶೂ ಧರಿಸಬೇಡಿ. ಉಷ್ಣತೆಯಿಂದ ಸುಸ್ತಾದಾಗ ತುಂಬಾ ತಣ್ಣಗಿನ ಅಥವಾ ಶೀತಲೀಕರಿಸಿದ ನೀರಿನಿಂದ ಒರೆಸಿಕೊಳ್ಳಬೇಡಿ ( ಇದರಿಂದ ದೇಹದ ಹೊರ ಪದರದಲ್ಲಿನ ರಕ್ತನಾಳಗಳು ಸಂಕುಚಿತಗೊಂಡು ದೇಹದ ಒಳಗಿನ ಉಷ್ಣತೆ ದೇಹದೊಳಗೆ ಬಂಧಿತವಾಗಿ ಅಂಗಾಂಗಗಳು ನಿಷ್ಕ್ರಿಯಗೊಂಡು ಹೆಚ್ಚಿನ ಹಾನಿಯಾಗುವ ಸಂಭವವಿರುತ್ತದೆ )
ಎಂದು ತಿಳಿಸಿದ್ದಾರೆ.
ಶಾಖಾಘಾತದ ಲಕ್ಷಣಗಳು:
ಅತಿಹೆಚ್ಚು ಬಿಸಿಲಿನ ತಾಪಮಾನದಿಂದ ಶಾಖಾಘಾತಕ್ಕೆ ಒಳಗಾಗುವ ಸಂಭವವಿರುತ್ತದೆ. ಅದರಲ್ಲಿ ಮುಖ್ಯವಾಗಿ ಸಂಭ್ರಾಂತಿ, ಸ್ಪಷ್ಟವಿಲ್ಲದ ಮಾತು, ಅರೆಪ್ರಜ್ಞೆ ಶಾಖಾಘಾತದ ಲಕ್ಷಣಗಳಾಗಿವೆ.
ಶಾಖಾಘಾತಕ್ಕೆ ಚಿಕಿತ್ಸೆ: ಮನುಷ್ಯನು ಬಿಸಿಲಿನ ಬೇಗೆಯಿಂದ ಶಾಖಾಘಾತಕ್ಕೊಳಗದಾಗ ನೆರಳಿರುವೆಡೆಗೆ ಸ್ಥಳಾಂತರಿಸಬೇಕು.
ವ್ಯಕ್ತಿಯ ವಸ್ತ್ರಗಳನ್ನು ಸಡಿಲಗೊಳಿಸಿ ಅಂಗಾತ ಮಲಗಿಸಿಬೇಕು. ಕಾಲುಗಳನ್ನು ಎತ್ತರಿಸಿ, ಸಾಮಾನ್ಯ ನೀರಿನಿಂದ ದೇಹವನ್ನು ಒರೆಸಬೇಕು. ಅತಿ ಅಗತ್ಯವೆನಿಸಿದರೆ ಹತ್ತಿರದ ವೈದ್ಯರ ಬಳಿ ತಕ್ಷಣವೇ ಕರೆದುಕೊಂಡು ಹೊಗಬೇಕು. ಈಗಾಗಲೆ ಬೇಸಿಗೆ ಮುಂಜಾಗ್ರತೆಗಾಗಿ ಹವಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ ಶಿವಕುಮಾರ್ ನಾರಾ ರವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಜನತೆಗೆ ಜಾಗೃತಿ ನೀಡಲು ಕ್ರಮ ವಹಿಸಲಾಗುತ್ತಿದೆಯೆಂದು ಎಂದು ತಿಳಿಸಿದರು.
ವಾಂತಿ ಬೇಧಿ ತಡೆ:
ಬೇಸಿಗೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳು ಉಂಟಾಗುವ ಹಿನ್ನಲೆಯಲ್ಲಿ ಶುದ್ದೀಕರಿಸಿದ ನೀರು ಅಥವಾ ನೀರು ಶುದ್ದೀಕರಣ ಘಟಕದ ನೀರನ್ನು ಕುಡಿಯಲು ಬಳಸಬೇಕು. ಅಲ್ಲದೆ ಊಟದ ಮೊದಲು ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ 45 ಸೆಕೆಂಡ್‌ಗಳ ಕಾಲ ತೊಳೆದ ನಂತರ ಆಹಾರ ಸೇವಿಸಬೇಕು. ನೀರಿನ ಸಂಗ್ರಹಣಗಳ ಮೇಲೆ ತಪ್ಪದೇ ಮುಚ್ಚಳ ಮುಚ್ಚಬೇಕು. ಸುರಕ್ಷಿತ ಆಹಾರ ಮಾತ್ರ ಸೇವಿಸಿ, ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಿರಿ, ರಸ್ತೆ ಬದಿ ತೆರೆದಿಟ್ಟ ಆಹಾರ ಪದಾರ್ಥ ಸೇವಿಸಬಾರದು, ಮಲ, ಮೂತ್ರ ವಿಸರ್ಜನೆಗಾಗಿ ಶೌಚಾಲಯ ಬಳಸಬೇಕು. ಇದಕ್ಕಾಗಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್ ಕೆ ನೇತೃತ್ವದಲ್ಲಿ ಅಗತ್ಯ ಜಾಗೃತಿ ನೀಡಲಾಗುತ್ತಿದೆ ಎಂದರು.
ಅಲ್ಲದೆ ಯಾವುದೇ ತುರ್ತು ವಾಹನಕ್ಕಾಗಿ ( ಆ್ಯಂಬ್ಯುಲೆನ್ಸ್ ) 108 ಕ್ಕೆ ಕರೆ ಮಾಡಿ ಸದಯಪಯೋಗ ಪಡೆಯಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರ ಬಾಬು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.


