ರಾಯಚೂರು ಮಾರ್ಚ್ ೦5: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ನೌಕರರ ಕೇಂದ್ರ ಸಂಘದ ಆದೇಶದ ಮೇರೆಗೆ ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಾರ್ಚ್ 11 ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (ರಿ), ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ (ರಿ) ಹಾಗೂ ಇಲಾಖೆಯ ಎಲ್ಲಾ ವೃಂದ ಸಂಘಟನೆಯ ವತಿಯಿಂದ ಮುಷ್ಕರದ ಭಾಗವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ರಾಯಚೂರುರವರಿಗೆ ಲಿಖಿತ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಮೊದಲನೇ ಹಂತವಾಗಿ ದಿನಾಂಕ 11-೦3-2026 ರಿಂದ 15-೦3-2026ರವರೆಗೆ ಕಪ್ಪುಪಟ್ಟಿ ಧರಿಸಿ ಹೊರರೋಗಿ ಸೇವೆ ನೀಡದೇ ಕೇವಲ ತುರ್ತು ಸೇವೆ ಒದಗಿಸಲಾಗುವುದು, ಎರಡನೇ ಹಂತದಲ್ಲಿ ದಿನಾಂಕ: ೧೬/೦೩/೨೦೨೬ ರಿಂದ ಬೇಡಿಕೆ ಈಡೇರುವವರೆಗೂ ಜಿಲ್ಲೆಯ ಆರೋಗ್ಯ ಇಲಾಖೆಯ ಎಲ್ಲಾ ವೈದ್ಯರು, ಅಧಿಕಾರಿ ನೌಕರರು ಕರ್ತವ್ಯಕ್ಕೆ ಅನಿರ್ಧಿಷ್ಟಾವಧಿವರೆಗೆ ಗೈರುಹಾಜರಾಗುವದಾಗಿ ತಿಳಿಸಿದರು.
ಬೇಡಿಕೆಗಳು: ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಇಲಾಖೆಯಿಂದ ಔಷಧಿಗಳನ್ನು ಸರಬರಾಜು ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ ೦೩ ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಬೇಕು. ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲ ಕಾಲಕ್ಕೆ ಪ್ರಕಟಿಸಬೇಕು.
ಇಲಾಖೆಯ ಎಲ್ಲಾ ವೃಂದದ ಯಾವುದೇ ಅಧಿಕಾರಿ-ನೌಕರರಿಗೆ ಕಳೆದ ೦೫ ವರ್ಷಗಳಿಂದ ಮುಂಬಡ್ತಿಗಳನ್ನು ನೀಡಿರುವುದಿಲ್ಲ. ಕೂಡಲೇ ಮುಂಬಡ್ತಿಗಳನ್ನು ನೀಡಬೇಕು. ನಿಯಮಗಳಲ್ಲಿದ್ದಂತೆ ಸೇವಾನಿರತ ವೈದ್ಯರು, ಅಧಿಕಾರಿ-ನೌಕರರ ಉನ್ನತ ವ್ಯಾಸಂಗ/ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ನೀಡಬೇಕು. ಇಲಾಖೆಯ ವರ್ಗಾವಣೆ ಕಾಯ್ದೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸದೇ ಅವೈಜ್ಞಾನಿಕವಾಗಿ ಕೌನ್ಸಿಲಿಂಗ್ ವರ್ಗಾವಣೆ ಮಾಡುತ್ತಿರುವುದನ್ನು ಸರಿಪಡಿಸಬೇಕು. ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ವಾಯತ್ತ ಸಂಸ್ಥೆಗಳಲ್ಲಿ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರ ಪಾಲಿಕೆಗಳಲ್ಲಿ ಮಂಜೂರಾಗಿರುವ ಆರೋಗ್ಯ ಇಲಾಖೆಯ ಎನ್-ಕೇಡರ್ ಹುದ್ದೆಗಳಿಗೆ ನೇಮಕಾತಿ, ಮುಂಬಡ್ತಿ ಮತ್ತು ವರ್ಗಾವಣೆಗಳಿಗೆ ಆರೋಗ್ಯ ಇಲಾಖೆಯ ವೈದ್ಯರು, ಅಧಿಕಾರಿ-ನೌಕರರನ್ನೇ ನಿಯೋಜಿಸಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು, ಅರೆ ವೈದ್ಯಕೀಯ ಹಾಗೂ ಇತರೆ ವೃಂದದ ಹುದ್ದೆಗಳನ್ನು ಭರ್ತಿ ಮಾಡಬೇಕು. ಗುತ್ತಿಗೆ ವೈದ್ಯರು-ನೌಕರರು ಹಾಗೂ ಎನ್.ಹೆಚ್.ಎಂ. ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಕಾಲ ಕಾಲಕ್ಕೆ ಸೂಕ್ತ ವೇತನ ಹೆಚ್ಚಳ ಮಾಡಬೇಕು.
ಇಲಾಖೆಯಲ್ಲಿಕೇಂದ್ರ ಪುರಸ್ಕೃತ ಯೋಜನೆ ಅಡಿ ಕಾರ್ಯನಿರತ ಸುಮಾರು ೬೦೦೦ ಅಧಿಕಾರಿ-ನೌಕರರಿಗೆ ಹಲವಾರು ವರ್ಷಗಳಿಂದ ೩-೪ ತಿಂಗಳಿಗೊಮ್ಮೆ ವೇತನ ಭತ್ಯೆಗಳನ್ನು ನೀಡುತ್ತಿದ್ದು, ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ ಭತ್ಯೆಗಳನ್ನು ನೀಡಬೇಕು.
ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ತಜ್ಞವೈದ್ಯರು ಇತರೆ ಸಿಬ್ಬಂದಿಯವರಿಗೆ ಸಿ.ಜಿ.ಹೆಚ್.ಎಸ್/ ಎ.ಐ.ಸಿ.ಟಿ.ಇ (ವೈದ್ಯಕೀಯ ಶಿಕ್ಷಣ ಮಾದರಿ ) ವೇತನ ನೀಡಬೇಕು. ಸರ್ಕಾರಿ ವೈದ್ಯರುಗಳು ಕರ್ತವ್ಯದಅವಧಿಯ ನಂತರ ಖಾಸಗಿ ಸೇವೆಗೆ ಈ ಹಿಂದಿನಂತೆ ಅವಕಾಶ ನೀಡಬೇಕು. ಅಲ್ಲದೆ ವೈದ್ಯಕೀಯ ಸೇವೆಯು ಅತ್ಯಂತ ಮಹತ್ವದ ಸೇವೆಯಾಗಿದ್ದು, ಈ ಸೇವೆಯು ಸಾರ್ವಜನಿಕರಿಗೆ ಸದಾ ಲಭ್ಯವಾಗುವಂತೆ ೧೯೮೬ರ ಆದೇಶದನ್ವಯ ಸರ್ಕಾರಿ ವೈದ್ಯರು ಖಾಸಗಿ ಸೇವೆಯನ್ನು ಕರ್ತವ್ಯ ಅವಧಿಯ ನಂತರ ಇಲ್ಲಿಯವರೆಗೆ ನಡೆಸುತ್ತಿದ್ದಾರೆ. ಆದರೆ ಪ್ರಸ್ತುತ ಸರ್ಕಾರಿ ವೈದ್ಯರುಗಳು ಒಳರೋಗಿ ಸೇವೆಯನ್ನು ನೀಡಬಾರದು ಎಂದು ನಿರ್ಭಂದಿಸಲಾಗಿದೆ. ಈ ನಿರ್ಬಂಧವನ್ನು ಹಿಂಪಡೆಯಬೇಕೆಂದು ಸಂಘದ ವತಿಯಿಂದ ಆಗ್ರಹಿಸಲಾಯಿತು.
ಬೇಡಿಕೆಗಳನ್ನು ನಿಗದಿತ ದಿನಾಂಕದಲ್ಲಿ ಈಡೇರಿಸದಿದ್ದಲ್ಲಿ ಇಲಾಖೆಯ ಎಲ್ಲಾ ವೃಂದ ಸಂಘಗಳ ಸಹಯೋಗದಿಂದ ಅನಿವಾರ್ಯವಾಗಿ ದಿನಾಂಕ: 11/೦3/2026 ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲು ದಿನಾಂಕ: ೧೩/೦೨/೨೦೨೬ರಂದು ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಇದೇ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣ ಶಾವಂತಗೇರಾ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ಡಾ.ಗಣೇಶ ಕೆ., ಪ್ರಾಥಮಿಕ ಆರೋಗ್ಯ ಸಿರಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ಮಂಜುಳಾ, ಜಿಲ್ಲಾ ಆರೋಗ್ಯ ನಿರೀಕ್ಷಣಾದಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ಸುರೇಶ ಭಂಡಾರಿ, ಅಧ್ಯಕ್ಷರು ಜಿಲ್ಲಾ ಶೂಶ್ರೂಣಾಧಿಕಾರಿಗಳ ಸಂಘ, ಜಿಲ್ಲಾ ಫಾರ್ಮಸಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ, ಜಿಲ್ಲಾ ಪ್ರಯೋಗಶಾಲಾ ತಾಂತ್ರೀಕ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ಅಡಿವೆಪ್ಪ, ಜಿಲ್ಲಾ ಲಿಪಿಕ ನೌಕರರ ಸಂಘದ ಜಿಲ್ಲಾದ್ಯಕ್ಷರಾದ ಶ್ರೀಧರ ಕುಲ್ಕರ್ಣಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಗುತ್ತಿಗೆ & ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಡಾ. ಅಶೋಕ ಹಾಗೂ ನೇತ್ರಾಧಿಕಾರಿಗಳ ಜಿಲ್ಲಾ ಸಂಘದ ಅಧ್ಯಕ್ಷರಾದ ಶೈಲೆಂದ್ರ ಸೇರಿದಂತೆ ವಿವಿಧ ಸಂಘದ ವಿವಿಧ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *