ತುಂಗಭದ್ರಾ ನೀರಾವರಿ ಕಾರ್ಮಿಕರ ವಿವಿಧ ಬೇಡಿಕೆಗಳು ಈಡೇರಿಸಲು ಸರ್ಕಾರಕ್ಕೆ ಆಗ್ರಹಿಸಿ ರಾಯಚೂರು ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಾ.7ರಂದು ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎಐಸಿಸಿಟಿಯು ಕೇಂದ್ರ ಸಮಿತಿ ಮುನಿರಬಾದ್ ಅಧ್ಯಕ್ಷ ಕೆ.ನಾಗಲಿಂಗಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಟಿಬಿ ಡ್ಯಾಂ ನೀರಾವರಿ ಯೋಜನೆ ರಾಜ್ಯದ ಬಹುದೊಡ್ಡ ನೀರಾವರಿ ಅಚ್ಚುಕಟ್ಟು ಪ್ರದೇಶವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ, ಬಳ್ಳಾರಿ, ಹಾಗೂ ವಿಜಯನಗರ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ಈ ಯೋಜನೆಯಂದ ಲಕ್ಷಾಂತರ ಎಕರೆ ಪ್ರದೇಶವು ನೀರಾವರಿಗೆ ಒಳಪಟ್ಟಿದೆ, ಕಳೆದ 25-30 ವರ್ಷಗಳಿಂದ ಅತ್ಯಂತ ಕಡಿಮೆ ಕೂಲಿಯಿಂದ ಕೆಲಸ ಮಾಡುತ್ತಾ, ಬಂದಿರುವ ಗ್ಯಾಂಗ್ ಮನ್, ವಾಚ್ ಮನ್, ಸವಡಿ, ಕಂಪ್ಯೂಟರ್ ಆಪರೇಟರ್, ಹೌಸ್ ಕೀಪಿಂಗ್, ಸೇರಿದಂತೆ ಇನ್ನಿತರೆ ಹುದ್ದೆಗಳಲ್ಲಿ ಕಾರ್ಮಿಕರು ಹಗಲು ರಾತ್ರಿ ಎನ್ನದೆ, ಕಲ್ಲು ಮುಳ್ಳು, ಹಾವು-ಚೇಳುಗಳನ್ನು ಲೆಕ್ಕಿಸದೆ, ತಮ್ಮ ಜೀವದ ಹಂಗನ್ನೂ ತೊರೆದು ರೈತರ ಜಮೀನುಗಳಿಗೆ ನೀರು ಹರಿಸುವ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಶ್ರಮಪಡುತ್ತಿದ್ದರು ಕೂಡ ಟಿಬಿ ಡ್ಯಾಂ ನೀರಾವರಿ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಇಲ್ಲದಂತಾಗಿದೆ. ಹಾಗಾಗಿ ಇದರ ಕುರಿತು ಚುನಾಯಿತ ಜನಪ್ರತಿನಿಧಿಗಳು ಹಾಗೂ ಸರ್ಕಾರವನ್ನು ಸಮಾವೇಶದ ಮೂಲಕ ಗಮನ ಸೆಳೆಯಲಾಗುತ್ತಿದೆ ಎಂದು ಹೇಳಿದರು.
ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸಿ, ತುಂಗಭದ್ರಾ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು, ತುಂಗಭದ್ರಾ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ನೀರಾವರಿ ಕಾರ್ಮಿಕರಿಗೆ ಬದುಕುವ ವೇತನ ಇಪಿಎಫ್ ಮತ್ತು ಐಎಸ್ಐ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಪಾವತಿಸಬೇಕು, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಕಾರ್ಮಿಕರಿಗೆ ಕೆಲಸದ ಪರಿಕರ, ಗುರುತಿನ ಚೀಟಿ, ಸಮವಸ್ತ್ರವು ಸೇರಿದಂತೆ ಮೂಲ ಸೌಕರ್ಯ ನೀಡಬೇಕು. ನೀರಾವರಿ ಕಾರ್ಮಿಕರ ಬಾಕಿ ವೇತನ, ಪಿಎಫ್ ಮತ್ತು ಇಎಸ್ಐ ಕೂಡಲೇ ಪಾವತಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಲು ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ: ಎಐಸಿಸಿಟಿಯು ಜಿಲ್ಲಾಧ್ಯಕ್ಷರಾದ ಅಜೀಜ್ ಜಾಗೀರದಾರ್, ಸಿಂಧನೂರು ವಿಭಾಗದ ಅಧ್ಯಕ್ಷ ವಾದಿರಾಜ್ ಕುಲಕರ್ಣಿ, ವೀರೇಶ ಸುಲ್ತಾನಪುರ, ಶರಣಪ್ಪ ಉದ್ಬಾಳ, ಮೊಹಮ್ಮದ್ ಸಾಬ್, ಸಬಾಸ್ಟೀನ್, ದೇವೇಂದ್ರ, ವೆಂಕಟೇಶ ತಿಮ್ಮಾಪುರ, ಹುಸೇನ್ ಸಾಬ್, ಸೇರಿದಂತೆ ಅನೇಕರಿದ್ದರು.

