ಮಾನ್ವಿ : ತಾಲೂಕಿನ ನಕ್ಕುಂದಿ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಕೃಷಿ ಕೂಲಿ ಕಾರ್ಮಿಕರ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಖಾಲಿದ್ ಅಹ್ಮದ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಅಧ್ಯಕ್ಷ ಬಂಡೆಗುರು ಕರೆಗುಡ್ಡ, ನಕ್ಕುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 15ನೇ ಹಣಕಾಸು ಯೋಜನೆಯ 2024-25ನೇ ಸಾಲಿನ ಅನುದಾನದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ಅನುದಾನದ ಹಣವನ್ನು ಎತ್ತುವಳಿ ಮಾಡಲಾಗಿದೆ. ಕೈಗೊಂಡಿರುವ ಕಾಮಗಾರಿಗಳ ಶೀರ್ಷಿಕೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ ಪುನಃ ಅನುದಾನ ಎತ್ತುವಳಿ ಮಾಡಿರುವುದು ಕಂಡುಬರುತ್ತಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ 15ನೇ ಹಣಕಾಸಿನ ಅನುದಾನ ಬಳಕೆಯ ಕುರಿತು ಸಮಗ್ರ ತನಿಖೆ ನಡೆಸಿ, ಯಾವ ಕಾಮಗಾರಿಗಳಿಗೆ ಹಣ ಬಳಸಲಾಗಿದೆ ಎಂಬುದನ್ನು ಸ್ಥಳೀಯ ನಿವಾಸಿಗಳಿಂದ ಮಹಜರು ಪಡೆದು ಪರಿಶೀಲಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇನ್ನೂ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೋಟಾರ್ ರಿಪೇರಿ ಹಾಗೂ ಖರೀದಿ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ. ಕಚೇರಿ ಅಭಿವೃದ್ಧಿ ಅನುದಾನದಲ್ಲಿ ಇಂಟರ್ನೆಟ್ ವೆಚ್ಚ, ಕಾರ್ಟೇಜ್ ಖರೀದಿ, ಕಂಪ್ಯೂಟರ್ ಖರೀದಿ ಮತ್ತು ರಿಪೇರಿ ಹೆಸರಿನಲ್ಲಿ ಅವ್ಯವಹಾರ ನಡೆದಿದೆ. ವಸತಿ ನಿಲಯ ಮಂಜೂರು ಮಾಡಿಕೊಡುವುದಾಗಿ ಹೇಳಿ ಸಾರ್ವಜನಿಕರಿಂದ 5 ಸಾವಿರದಿಂದ 10 ಸಾವಿರ ರೂಪಾಯಿ ವರೆಗೆ ಹಣ ಪಡೆದು ವಂಚಿಸಲಾಗಿದೆ ಎಂದು ದೂರಿದರು. ಕರೆಗುಡ್ಡ ಗ್ರಾಮದ ಗ್ರಂಥಾಲಯವನ್ನು ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಬೇರೆ ಕಡೆ ವರ್ಗಾಯಿಸಬೇಕು, ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡದೇ ಕಡಿಮೆ ಕೂಲಿ ನೀಡಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ನೀರು, ನೆರಳು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು. ಜೊತೆಗೆ ಕರೆಗುಡ್ಡ ಗ್ರಾಮದ ಸರ್ಕಾರಿ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮೌನೇಶ ಜಾಲವಾಡಗಿ, ಜಿ. ಹನುಮೇಶ ನಾಯಕ, ಮರೇಗೌಡ, ಕುಮಾರ, ಹುಸೇನಪ್ಪ, ಮೌನೇಶ, ರವಿ, ಪಾಲರಾಜ, ಹನುಮಯ್ಯ ನಾಯಕ, ಅಂಬಣ್ಣ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *