ಮುದ್ದೇಬಿಹಾಳ: ತಾಲೂಕಿನ ಹೀರೆಮುರಾಳದಿಂದ ನಾಲತವಾಡಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಸೇತುವೆಯ ಮೇಲಿನ ತಡೆಗೋಡೆಗಳು ಸಂಪೂರ್ಣವಾಗಿ ನಾಶವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ತೀವ್ರ ಆತಂಕ ವ್ಯಕ್ತವಾಗಿದೆ.
ಈ ಕುರಿತು ಕರ್ನಾಟಕ ಭೀಮಸೇನೆ ಜಿಲ್ಲಾ ಸಮಿತಿಯ ಯುವ ಘಟಕ ಅಧ್ಯಕ್ಷ ಪರಶುರಾಮ್ ಚಲವಾದಿ ಅವರು ಪತ್ರಿಕಾ ಪ್ರಕಟಣೆ ನೀಡಿ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ತಡೆಗೋಡೆಗಳನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
“ಈ ರಸ್ತೆ ದಿನನಿತ್ಯ ನೂರಾರು ವಾಹನಗಳ ಸಂಚಾರ ಹೊಂದಿದ್ದು, ಸೇತುವೆಯ ಎರಡೂ ಬದಿಯ ತಡೆಗೋಡೆಗಳು ಸಂಪೂರ್ಣ ಕುಸಿದು ಹೋಗಿವೆ. ರಾತ್ರಿ ವೇಳೆ ಹಾಗೂ ಮಳೆಗಾಲದಲ್ಲಿ ವಾಹನ ಸವಾರರಿಗೆ ಭಾರಿ ಅಪಾಯ ಉಂಟಾಗುತ್ತಿದೆ. ಈಗಾಗಲೇ ಹಲವು ಸಣ್ಣಪುಟ್ಟ ಅಪಘಾತಗಳು ಸಂಭವಿಸಿದ್ದು, ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು” ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಸೇತುವೆಯ ಪಕ್ಕದಲ್ಲಿ ಗಿಡಗಂಟೆಗಳು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ವಾಹನ ಸವಾರರ ದೃಷ್ಟಿಗೆ ಅಡ್ಡಿಯಾಗುತ್ತಿದೆ. ರಸ್ತೆ ಬದಿಯ ಸ್ವಚ್ಛತೆ ಇಲ್ಲದ ಕಾರಣ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಸಂಬಂಧಪಟ್ಟ ಇಲಾಖೆ ತಕ್ಷಣವೇ ಗಿಡಗಂಟೆಗಳನ್ನು ತೆರವುಗೊಳಿಸಿ, ಸಂಪೂರ್ಣ ಸ್ವಚ್ಛತೆ ಮಾಡಿಸಿ ಸುರಕ್ಷಿತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ, ಕರ್ನಾಟಕ ಭೀಮಸೇನೆ ಜಿಲ್ಲಾ ಸಮಿತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಮುಂದೆ ಯಾವುದೇ ಅನಾಹುತ ಸಂಭವಿಸದಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

