ರಾಯಚೂರು ನವೆಂಬರ್ 26 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನವೆಂಬರ್ 26ರಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ, ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಸಂವಿಧಾನ ಜಾಗೃತಿ ಜಾಥಾ ಆರಂಭವಾಯಿತು. ಇದೆ ಸಂದರ್ಭದಲ್ಲಿ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್, ರಾಯಚೂರು ನಗರ ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷರಾದ ಪವನ ಕಿಶೋರ್ ಪಾಟೀಲ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಈಶ್ವರ ಕಾಂದೂ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರಸ್ವಾಮಿ, ಸಹಾಯಕ ಆಯುಕ್ತರಾದ ಗಜಾನನ ಬಾಳೆ, ತಹಸೀಲ್ದಾರ ಸುರೇಶ ವರ್ಮಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ನಾಗೇಂದ್ರ ಮಠಮಾರಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ, ಸಂವಿಧಾನ ಪೀಠಿಕೆಯನ್ನು ಓದಿದರು. ಬಳಿಕ ಜಾಥಾವು, ಬಸವೇಶ್ವರ ವೃತ್ತ, ಚಂದ್ರಮೌಳೇಶ್ವರ ವೃತ್ತ, ತೀನ್ ಕಂದಿಲ್ ವೃತ್ತ, ತಹಸೀಲ್ದಾರ ಕಚೇರಿ, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಗರದ ಶ್ರೀ ಪಂಡಿತ್ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರಕ್ಕೆ ಬಂದು ಸೇರಿತು. ಜಾಥಾದಲ್ಲಿ ಭಾಗಿಯಾಗಿದ್ದ ವಿವಿಧ ಸಂಘಟನೆಗಳು ಪದಾಧಿಕಾರಿಗಳು, ನಾಗರಿಕರು, ಮಹಿಳೆಯರು, ವಿವಿಧ ಶಾಲಾ ಕಾಲೇಜುಗಳ ಮತ್ತು ವಸತಿ ನಿಲಯಗಳ ವಿದ್ಯಾರ್ಥಿಗಳು ಸಂವಿಧಾನ ಜಾಗೃತಿಯ ಫಲಕ, ಸಂವಿಧಾನ ಪುಸ್ತಕ, ರಾಷ್ಟದ್ವಜ ಹಿಡಿದು ಸಾಲಾಗಿ ಜಾಥಾದ ಮೆರುಗು ಹೆಚ್ಚಿಸಿದರು.
ಬಳಿಕ, ಜಿಲ್ಲಾ ರಂಗಮಂದಿರದಲ್ಲಿ ನಡೆದ ವೇದಿಕೆಯ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಉದ್ಘಾಟಿಸಿ ಮಾತನಾಡಿ, ನ್ಯಾಯ ಮತ್ತು ಸಮಾನತೆಯ ಆಶಯ ಹೊಂದಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವರಿಗು ಸಮಬಾಳು ಎನ್ನುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯೊಂದಿಗೆ ದೇಶದ ಜನತೆಗೆ ಸಮಾನತೆಯನ್ನು ಮತ್ತು ನ್ಯಾಯ ಕೊಡಲು ಮಹತ್ವದ ಸಂವಿಧಾನ ರಚಿಸಿ ದೇಶದ ಜನತೆಗೆ ಸಮರ್ಪಿಸಿರುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ ಎಂದು ತಿಳಿಸಿದರು.
ಸಮಾಜದಲ್ಲಿನ ಆರ್ಥಿಕ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು, ಪರಿಹರಿಸಲು ನಾವುಗಳು ಕೈಗೊಂಡ ಹಾಗೂ ಕೈಗೊಳ್ಳಬೇಕಾದ ಕಾರ್ಯಗಳಿಗೆ ಸಂವಿಧಾನವು ದಿಕ್ಸೂಚಿಯಾಗಿದೆ. ಸಂವಿಧಾನದಿಂದಾಗಿ ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಹಂತ ಹಂತವಾಗಿ ಸಮಾನವಕಾಶಗಳು ದೊರಕುತ್ತ ಸಮಾಜವು ಬದಲಾವಣೆಯತ್ತ ಸಾಗುತ್ತಿದೆ. ಮಹಿಳೆಯರು ಸಹ ಪ್ರತಿಯೊಂದು ರಂಗದಲ್ಲಿ ಸಾಧನೆ ತೋರುತ್ತಿದ್ದಾರೆ ಎಂದು ತಿಳಿಸಿದರು.
ಹಟ್ಟಿ ಚಿನ್ನದ ಗಣಿ ಕಂಪನಿಯ ಉಪಪ್ರಧಾನ ವ್ಯವಸ್ಥಾಪಕರು ಹಾಗೂ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ಶ್ರೀಕೃಷ್ಣ ಶಾವಂತಗೇರಿ ಅವರು ಮಾತನಾಡಿ, ಭಾರತ ದೇಶವು ಹಲವು ಧರ್ಮಗಳ ನಾಡಾಗಿದೆ. ವಿವಿಧೆತೆಯಲ್ಲಿ ಏಕತೆಯನ್ನು ತರುವಲ್ಲಿ ಸಂವಿಧಾನವು ನಮಗೆ ಮಾರ್ಗತೋರಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ಉತ್ತಮವಾದ ದಾರಿ ತೋರಿದ್ದಾರೆ. ಸದೃಢ ದೇಶ ನಿರ್ಮಾಣವು ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಸುಭಾಷ್ ಚಂದ್ರ ಅವರು ವಿಶೇಷ ಉಪನ್ಯಾಸ ನೀಡಿ, ದೇಶದ ಸ್ವಾತಂತ್ರ‍್ಯಕ್ಕಾಗಿ ಹಲವಾರು ನಾಯಕರು ಹೋರಾಟ ಮಾಡುತ್ತಿದ್ದಾಗ ಡಾ.ಬಿ.ಆರ್.ಅಂಬೇಡ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವುದರ ಜೊತೆಗೆ ಸಮಾಜ ಸುಧಾರಣೆಯ ಗಣ ಕಾರ್ಯಕೈಗೊಂಡರು. ಜಾತಿ, ಮತ, ಮೂಢನಂಬಿಕೆ, ಕಂದಾಚಾರದಿಂದ ನರಳುತ್ತಿದ್ದ ಸಮಾಜವನ್ನು ಕಂಡು ಇವುಗಳನ್ನು ಸಂಪೂರ್ಣ ನಿರ್ಮೂಲನೆಯಾಗಲೇಬೇಕು ಎಂದು ಸಂವಿಧಾನ ರಚಿಸಿ ಅದರ ಶ್ರೇಷ್ಠತೆಯನ್ನು ತಿಳಿಸಿಕೊಟ್ಟರು.
ಆ ಸಮಾಜ, ಈ ಸಮಾಜ ಎನ್ನದೇ ಎಲ್ಲ ಸಮಾಜದವರು ಮೀಸಲು ಸೌಲಭ್ಯ ಪಡೆದು ಮುಂದೆ ಬರಲು ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ಅದರಿಂದ ಸಮಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಸಂವಿಧಾನದ ಓದುವುದರ ಜೊತೆಗೆ ಪ್ರತಿಯೊಬ್ಬರ ಮನೆಯಲ್ಲೂ ಸಹ ಸಂವಿಧಾನದ ಪೀಠಿಕೆ, ಭಾವಚಿತ್ರವನ್ನು ಒಳಗೊಳ್ಳುವುದು ಸೂಕ್ತವಾಗಿದೆ ಎಂದು ತಿಳಿಸಿದರು.
ಸಂವಿಧಾನವು ನಮ್ಮ ಭಾರತ ದೇಶದ ಪವಿತ್ರ ಗ್ರಂಥವಾಗಿದೆ. ಸಮಾಜದಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಲು ಸಂವಿಧಾನವು ನಮಗೆ ಸಹಕಾರಿಯಾಗಿದೆ. ಹಗಲು ರಾತ್ರಿ ಲೆಕ್ಕಿಸದೆ ಶ್ರಮಪಟ್ಟು ಸಾವಿರಾರು ಪುಟಗಳ ಸಂವಿಧಾನವನ್ನು ಸಿದ್ಧಗೊಳಿಸಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ಅಸಮಾನತೆಯು ನಮ್ಮ ದೇಶದಲ್ಲಿ ಇನ್ನು ಸಹ ನೆಲೆಯೂರಿದೆ. ಅಸಮಾನತೆಯನ್ನು ಅಳಿಸಲು ನಾವು ಮನುಷ್ಯರನ್ನು ಮನುಷ್ಯರಂತೆಯೇ ಕಾಣಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಅವರು ರಚಿಸಿದ ಸಂವಿಧಾನವು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ ಎಂಬುದನ್ನು ನಾವೆಲ್ಲರೂ ಮೊದಲು ಅರಿಯಬೇಕು. ಸಂವಿಧಾನವು ನ್ಯಾಯವಾದಿಗಳ ಸ್ವತ್ತು ಎಂದು ಭಾವಿಸದೇ, ಅದು ಎಲ್ಲರ ಸ್ವತ್ತು, ಸಂವಿಧಾನವು ಸದಾಕಾಲ ಚೈತನ್ಯವಾಗಿದೆ ಎಂಬುದನ್ನು ತಿಳಿಯಬೇಕು. ಸಂವಿಧಾನದ ಬಗ್ಗೆ ಬರೀ ಮಾತನಾಡದೇ, ಭಾಷಣ ಮಾಡದೇ ಮನೆಮನೆಗೆ ತೆರಳಿ ಅದರ ಅರಿವು ಮತ್ತು ಮನವರಿಕೆ ಮಾಡಿಕೊಡುವ ಕಾರ್ಯ ಆಗಬೇಕಿದೆ ಎಂದು ಅವರು ಸಲಹೆ ಮಾಡಿದರು.
ಗಮನ ಸೆಳೆದ ಜಾನ್‌ವೆಸ್ಲಿ: ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖಂಡರು ಮತ್ತು ಹೋರಾಟಗಾರರಾದ ಜಾನ್‌ವೆಸ್ಲಿ ಟಿ ಕಾತರಕಿ ಅವರು ಡಾ.ಬಿ.ಆರ್.ಅಂಬೇಡ್ಕರ್ ವೇಷ ಧರಿಸಿ ಗಮನ ಸೆಳೆದರು.
ಅಂಬೇಡ್ಕರ್ ಗೀತೆಗಳ ಗಾಯನ: ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷರು ಹಾಗೂ ಕಲಾವಿದರಾದ ಪರಶುರಾಮ ಅರೋಲಿ ಅವರು ಕಾರ್ಯಕ್ರಮದಲ್ಲಿ ಪ್ರಾರ್ಥಿಸಿ, ಅಂಬೇಡ್ಕರ್ ಗೀತೆಗಳ ಗಾಯನ ನಡೆಸಿಕೊಟ್ಟರು.
ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಕೆ.ಇ.ಕುಮಾರ, ಎಂ.ಆರ್.ಭೇರಿ, ಅನಿತಾ ನವಲಕಲ್, ನಿವೇದಿತಾ ಎನ್, ವಿಶ್ವನಾಥ ಪಟ್ಟಿ, ಬಸವರಾಜ ಸಾಸಲಮರಿ, ಗಿರಿಯಪ್ಪ ನೆಲಹಾಳ, ಕರುಣಕುಮಾರ ಕಟ್ಟಿಮನಿ, ಪಿ.ಪ್ರಭಾಕರ, ಪ್ರಾಣೇಶ ಮಂಚಾಳ, ರವಿ ದಾದಸ, ಎಂ ವೆಂಕಟೇಶ್ ಅರೋಲಿಕರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸಿಂಧೂ ರಘು ಹೆಚ್.ಎಸ್., ಆದಿ ಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ರಾಜೇಂದ್ರ ಜಲ್ದಾರ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಮಾನಪ್ಪ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಶಾಲಾ ಕಾಲೇಜುಗಳ, ವಸತಿ ನಿಲಯಗಳ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮಹಿಳೆಯರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *