ರಾಯಚೂರು (ಕರ್ನಾಟಕ ವಾರ್ತೆ): ಮಣ್ಣಿನ ಆರೋಗ್ಯ ಕಾಪಾಡಲು ಮತ್ತು ದೀರ್ಘಕಾಲೀನ ಉತ್ಪಾದಕತೆ ಸಾಧಿಸಲು ರಾಸಾಯನಿಕ ರಸಗೊಬ್ಬರಗಳ ಅತಿಯಾದ ಬಳಕೆಯನ್ನು ಹಂತಹಂತವಾಗಿ ಕಡಿಮೆ ಮಾಡಿ ಸಮತೋಲನಯುತ ಮತ್ತು ಪರಿಸರ ಸ್ನೇಹಿ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಶಾಶ್ವತ ಕೃಷಿ ಪದ್ಧತಿಗಳ ಅಗತ್ಯತೆಯನ್ನು ಅರಿಯಬೇಕು ಎಂದು ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷರಾದ ಪತಂಗೆ ಜಯವಂತ್ ರಾವ್ ಅವರು ಹೇಳಿದರು.
ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘ ನಿ.ರಾಯಚೂರಿನ ಸಭಾಂಗಣದಲ್ಲಿ ಫೆ.24ರಂದು ನಡೆದ ಭವ್ಯ ಅಧೀಕೃತ ಮಾರಾಟಗಾರ (ಡೀಲರ್ಸ್) ಸಮಾವೇಶದಲ್ಲಿ ಅವರು ಮಾತನಾಡಿದರು.
ನಪೇಡ್ ನಿರ್ದೇಶಕರಾಗಿದ್ದ ವೇಳೆ ನಿರ್ವಹಿಸಿದ ಕಾರ್ಯಗಳ ಬಗ್ಗೆ ಸ್ಮರಿಸಿದ ಅವರು, ಕಳೆದ ವರ್ಷ ಆರಂಭದಲ್ಲಿ ಯೂರಿಯಾ ಮತ್ತು ಡಿಎಪಿ ರಸಗೊಬ್ಬರಗಳ ತೀವ್ರ ಕೊರತೆಯಾಗಿತ್ತು. ರಾಯಚೂರು ಜಿಲ್ಲೆಯ ರೈತರಿಗೆ ಸಮರ್ಪಕ ಪ್ರಮಾಣದ ಯೂರಿಯಾ ಡಿ.ಎ.ಪಿ ಇತರೆ ರಸಗೊಬ್ಬರಗಳ ಸರಬರಾಜು ಆಗುವಂತೆ ಮಾಡಲು ಕೇಂದ್ರ ಸಚಿವರು ಹಾಗೂ ತಮ್ಮ ಸಹೋದ್ಯೋಗಿ ಮಿತ್ರರೊಂದಿಗೆ ನಿರಂತರ ಪ್ರಯತ್ನಿಸಿದ್ದರಿಂದಾಗಿ ಸಮರ್ಪಕ ಪ್ರಮಾಣದ ರಸಗೊಬ್ಬರವನ್ನು ಜಿಲ್ಲೆಗೆ ಪೂರೈಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಕೃಷಿ ಹಂಗಾಮಿನಲ್ಲಿ ರೈತರಿಗೆ ಯಾವುದೇ ತೊಂದರೆ ಆಗದಂತೆ ಈ ಹಿಂದ ಸಂಘಕ್ಕೆ ರಾಯಚೂರು-ಯಾದಗಿರಿ ಸಂಸದರಾದ ಜಿ.ಕುಮಾರ್ ನಾಯಕ್ ಮತ್ತು ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಗಳ ಸಭೆಯನ್ನು ಕರೆದು ಸಮರ್ಪಕ ರಸಗೊಬ್ಬರ ಸರಬರಾಜು ದಾಸ್ತನು ಕ್ರಮ ಕೈಗೊಳ್ಳಲಾಗಿದೆ. ಇದನ್ನು ಈ ಮುಂದೆಯು ಕೂಡ ಅಳವಡಿಸಿ ಕೊಳ್ಳಲಾಗುವುದು. ಮುಂದಿನ ಕೃಷಿ ಹಂಗಾಮಿನಲ್ಲಿ ಸಮಯಕ್ಕೆ ಸರಿಯಾಗಿ ರಸಗೊಬ್ಬರ ಲಭ್ಯತೆಗೆ ಒತ್ತು ಕೊಡಲಾಗವುದು ಎಂದು ಅವರು ತಿಳಿಸಿದರು.
ಸಹಕಾರ ಸಂಘಗಳ ಉಪನಿಬಂಧಕರಾದ ಎಂ.ಆರ್.ಮನೋಹರ್ ಅವರು ಮಾತನಾಡಿ, ನಮ್ಮ ಸಹಕಾರ ಇಲಾಖೆಯ ಕೃಷಿಕ ಭಾರತಿ ಕೋ-ಆಪರೇಟೀವ್ ನಿಯಮಿತ (ಕ್ರೀಬ್ಕೋ) ಇಂದು ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ರಸಗೊಬ್ಬರ ಉತ್ಪಾದಿಸುವ ಬೃಹತ್ ಕೈಗಾರಿಕೆಯಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ರೈತರು ಮಣ್ಣಿನ ಪರೀಕ್ಷೆಗೆ ಗಮನ ಹರಿಸಬೇಕು. ವಲಯದ ಮಣ್ಣಿಗೆ ಅನುಗುಣವಾಗಿ ಗೊಬ್ಬರದ ಬಳಕೆಯಿಂದ ಬೆಳೆಯ ಆರೋಗ್ಯವನ್ನು ವೃದ್ದಿಸುವ ಮತ್ತು ಹೆಚ್ಚು ಫಸಲು ಬರಲು ಸಹಕಾರಿಯಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಕ ಭಾರತಿ ಕೋ-ಆಪರೇಟೀವ್ ನಿಯಮಿತ (ಕ್ರೀಬ್ಕೋ) ಅವರ ಉತ್ತನ್ನಗಳ ಬಗ್ಗೆ ರೈತರು ಮತ್ತು ವಿತರಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಕ ಭಾರತಿ ಕೋ-ಆಪರೇಟೀವ್ ನಿಯಮಿತದ ರಾಯಚೂರು ಜಿಲ್ಲಾ ಸ್ಥಳೀಯ ಮಾರಾಟ ವ್ಯವಸ್ಥಾಪಕರಾದ ಶಶಿಕುಮಾರ ಅವರ ನೇತೃತ್ವದಲ್ಲಿ ನಡೆದ ಭವ್ಯ ಅಧೀಕೃತ ಮಾರಾಟಗಾರ (ಡೀಲರ್ಸ್) ಸಮಾವೇಶದಲ್ಲಿ ಇಫ್ಕೋ ರಾಯಚೂರು ಜಿಲ್ಲಾ ಸ್ಥಳೀಯ ಮಾರಾಟ ವ್ಯವಸ್ಥಾಪಕರಾದ ಸಚಿನ್, ಪ್ರಧಾನ ವ್ಯವಸ್ಥಾಪಕರಾದ ಬಂದಯ್ಯ ಸ್ವಾಮಿ, ಲೇಕಪಾಲಕರಾದ ನರಸಿಂಹಪ್ಪ, ಕ್ರೀಬ್ಕೋ ಮಾನ್ಯತೆ ಪಡೆದ ರಾಯಚೂರು ಜಿಲ್ಲೆಯ ರಸಗೊಬ್ಬರ ವಿತರಕರು, ಸುತ್ತಮುತ್ತಲಿನ ಪ್ರದೇಶಗಳ ಪ್ರಗತಿಪರ ರೈತರು ಹಾಗೂ ಗಣ್ಯರು ಭಾಗವಹಿಸಿದ್ದರು. ಕಂಪನಿ ಪ್ರತಿನಿಧಿಗಳು, ವಿತರಕರು ಮತ್ತು ರೈತರ ನಡುವಿನ ಸಂವಾದಕೆ ಕ್ರೀಬ್ಕೋ ಮಹತ್ವದ ವೇದಿಕೆ ನೀಡಿತು.

